
ಸುದ್ದಿ ಸಂಗ್ರಹ ಶಹಾಬಾದ್
ತೊನಸನಳ್ಳಿ ಮಠ ಭಕ್ತರಿಗೆ ಬೇಡಿದ್ದನ್ನು ಕೊಡುವ ಹಾಗೂ ಭಾವೈಕ್ಯತೆಯ ಸ್ಥಾನವಾಗಿದೆ. ಇಲ್ಲಿ ಎಲ್ಲ ಧರ್ಮದವರು ಭಕ್ತರಾಗಿದ್ದು, ಜಿಲ್ಲೆಯಲ್ಲಿ ಒಂದು ವಿಶಿಷ್ಟ ಭಾವೈಕ್ಯತೆಯ ಸ್ಥಾನವಾಗಬೇಕು ಎಂದು 10ನೇ ಪೀಠಾಧಿಪತಿ ಡಾ.ಮಲ್ಲಣ್ಣಪ್ಪ ಸ್ವಾಮಿಗಳು ಹೇಳಿದರು.
ತೊನಸನಳ್ಳಿ (ಎಸ್) ಗ್ರಾಮದ ಸದ್ಗುರು ಮಲ್ಲಣ್ಣಪ್ಪ ಮಹಾರಾಜ, ಶ್ರೀ ಅಲ್ಲಮಪ್ರಭು ಹಾಗೂ ಹಜರತ್ ಸುಲ್ತಾನ್ ಅಹ್ಮದ್ ಶಾಹವಲಿ ಅವರ ಜಾತ್ರೋತ್ಸವ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಅವರು, ಇಲ್ಲಿ ರಾತ್ರಿ ಗಂಧೋತ್ಸವ ನಡೆಯುತ್ತದೆ, ಮರುದಿನ ಸಂಜೆ ರಥೋತ್ಸವ ನಡೆಯುವ ಮೂಲಕ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ತಾಣವಾಗಿದೆ. ಕ್ಷೇತ್ರದ ಮಹಾತ್ಮೆ ಎಲ್ಲೆಡೆ ಪಸರಿಸಬೇಕು. ಜನರಿಗೆ ಇಲ್ಲಿನ ಇತಿಹಾಸ, ಹಿಂದಿನ ಪೀಠಾಧಿಪತಿಗಳ ಪವಾಡಗಳ ಬಗ್ಗೆ ತಿಳಿಸಿಬೇಕು ಎಂದು ಕರೆ ನೀಡಿದರು.
ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ್ ಮಾತನಾಡಿ, ಸ್ವಾತಂತ್ರ್ಯದ ನಂತರವು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ತೊನಸನಳ್ಳಿ(ಎಸ್) ಗ್ರಾಮಕ್ಕೆ ಶಾಸಕ ಬಸವರಾಜ ಮತ್ತಿಮೂಡ್ 3.5 ಕೋಟಿ ರೂ. ವೆಚ್ಚದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ. ಗ್ರಾಮದ ತಾಯಂದಿರು ಮನೆ ಮಗಳಾದ ನನಗೆ ಬೆಳ್ಳಿಯ ಕಳಸ, ತೆಂಗಿನ ಕಾಯಿ ಕೊಟ್ಟು ಪ್ರೀತಿಯಿಂದ ಉಡಿ ತುಂಬಿದ್ದು, ಜೀವಮಾನದಲ್ಲಿ ಮರೆಯುವುದಿಲ್ಲ. ತೊನಸನಳ್ಳಿ ರಸ್ತೆ ಸಮಸ್ಯೆಗೆ ಕೆಲವು ತಾಂತ್ರಿಕ ತೊಡಕುಗಳಿದ್ದು, ಶ್ರೀದಲ್ಲಿಯೇ ಶಾಸಕರ ಗಮನಕ್ಕೆ ತಂದು ಕಾಮಗಾರಿ ಆರಂಭಿಸಲಾಗುವುದು ಎಂದರು.
ದಸಂಸ ರಾಜ್ಯ ಸಂಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಭೀಮಣ್ಣ ಸಾಲಿ, ಲಚ್ಚಪ್ಪ ಜಮಾದಾರ ಮಾತನಾಡಿದರು.
ಮಹಾರಾಷ್ಟ್ರದ ನೂಲನ ಗುರುಸಿದ್ಧೇಶ್ವರ ಶಿವಾಚಾರ್ಯರು, ಹಲಕರ್ಟಿಯ ಅಭಿನವ ಮುನೀಂದ್ರ ಶಿವಾಚಾರ್ಯರು, ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಬಸವಕಲ್ಯಾಣದ ರತ್ನಾಕರ ಶಿವಯೋಗಿ, ಯರಗೋಳದ ಸಂಗಮೇಶ ದೇವರು, ದಸ್ತಗಿರ ಮುತ್ಯಾ ಮತ್ತು ಡಾ.ಸೌರಭ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪಿಐ ಪರಶುರಾಮ ವನಂಜಕರ್, ಪ್ರಮುಖರಾದ ರಾಜಗೋಪಾಲ ರೆಡ್ಡಿ, ನಿಂಗಪ್ಪ ಹುಳಗೋಳ, ಸೂರ್ಯಕಾಂತ ಪುಲಾರಿ, ಮಲ್ಲಿಕಾರ್ಜುನ ಗೊಳೇದ, ಮಹಾದೇವ ಬಂದಳ್ಳಿ, ನಾಗೇಂದ್ರ ಜಯಗಂಗಾ, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾವ್, ಜಯಶ್ರೀ ಕಟ್ಟಿಮನಿ ಮತ್ತು ಮುತ್ತಮ್ಮ ಮರತೂರ ಸೇರಿದಂತೆ ಅನೇಕರು ಇದ್ದರು.
ನವಲಿಂಗ ಪಾಟೀಲ್ ನಿರೂಪಿಸಿದರು, ಬಸವರಾಜ ಮದ್ರಕಿ ಸ್ವಾಗತಿಸಿದರು, ಚನ್ನವಿರ ಬೆಳಗುಂಪಾ ತಂಡದಿಂದ ರಸಮಂಜರಿ, ಮಹಾಂತೇಶ ಹುಲ್ಲೂರ ಅವರಿಂದ ಹಾಸ್ಯ, ಪ್ರತಿಕಾ ಗಾರಂಪಳ್ಳಿ, ಪ್ರಿಯದರ್ಶಿನಿ ಸಾಲಿ, ಸಾನಿಧ್ಯ ಸಾಲಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.