ವಾಡಿಯಲ್ಲಿ ಜನಸಂಪರ್ಕ ಸಭೆ ನಡೆಸಲು ಒತ್ತಾಯ

ತಾಲೂಕು

ಸುದ್ದಿ ಸುದ್ದಿ ಸಂಗ್ರಹ ವಾಡಿ
ಪಟ್ಟಣದ ವ್ಯಾಪ್ತಿಯ ಜನರ ಕುಂದು ಕೊರತೆಗಳನ್ನು ಅರಿತು ಬಗೆಹರಿಸಲು ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಜನಸಂಪರ್ಕ ಸಭೆ ನಡೆಸಲು ಸಮಯ ನೀಡಬೇಕು ಎಂದು ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಾಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನುಮ್ ಅವರಿಗೆ ಪತ್ರ ಬರೆದಿರುವ ಅವರು, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬೃಹತ್ ಸಿಮೆಂಟ್ ಕಂಪನಿ ಹಾಗೂ ಜಂಕ್ಷನ್ ರೈಲ್ವೆ ನಿಲ್ದಾಣ ಇರುವ ದೊಡ್ಡ ನಗರವಾಗಿದೆ. ಅಷ್ಟೆ ದೊಡ್ಡ ಪ್ರಮಾಣದಲ್ಲಿ ಜನರು ವಿವಿಧ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಚುನಾಯಿತ ಪ್ರತಿನಿಧಿಗಳು ಜನರಿಂದ ದೂರವಾಗಿ, ನಾಗರಿಕ ಸೌಲಭ್ಯಗಳು ಗಗನ ಕುಸುಮವಾಗಿದೆ ಮೂಲಭೂತ ಸೌಕರ್ಯಗಳು ಮರಿಚೀಕೆಯಾಗಿವೆ. ಜನರು ತಮಗಾಗುತ್ತಿರುವ ಆಡಳಿತಾತ್ಮಕ ತೊಂದರೆಗಳನ್ನು ಯಾರಿಗೆ ಹೇಳಬೇಕು ಎಂಬುದು ಅರ್ಥವಾಗದೆ ಗೋಳಾಡುತ್ತಿದ್ದಾರೆ ಎಂದು ವಿವರಿಸಿದರು.

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿದೆ, ಆದರೂ ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದುಳಿದಿದೆ, ಬಸ್ ನಿಲ್ದಾಣ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ, ಕುಡಿಯುವ ನೀರು, ಶೌಚಾಲಯ, ಮೂತ್ರಾಲಯಗಳಿಗೆ ಪರಿತಪಿಸುತ್ತಿದ್ದಾರೆ.

ಭೂಮಿ, ಆಸ್ತಿ ದಾಖಲೆ ಪತ್ರ ಪಡೆಯಲು ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಹೆಡೆಯಾಡುತ್ತಿದೆ, ಇಲ್ಲದಿದ್ದರೆ ನಾಳೆ ಬಾ, ತಿಂಗಳು ಬಿಟ್ಟು ಬಾ ಪದ್ಧತಿ ಮುಂದುವರೆಯುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗೆ ಔಷಧ ಸಿಗದೆ ಗೋಳಾಡುತ್ತಿದ್ದಾರೆ. ಈ ಭಾಗದ ಸರ್ಕಾರಿ ಶಾಲೆಗಳ ಕಟ್ಟಡ ಸ್ಥಿತಿ ಚಿಂತಾಜನಕವಾಗಿದೆ, ಸೌಲಭ್ಯಗಳ ಕೊರತೆ ಕಾಡುತ್ತಿದೆ, ಶಿಕ್ಷಣ ಸಂಪೂರ್ಣ ಕಳಪೆಯಾಗಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಾನುಸಾರವಾಗಿ ಮನವಿ ಪತ್ರಗಳು ನೀಡುತ್ತಲೆ ಬರುತ್ತಿದ್ದೆವೆ. ಅಲ್ಲದೆ ಜಿಲ್ಲಾಡಳಿತದ ಮುಖ್ಯಸ್ಥರಾದ ತಮಗೂ ಬಿಜೆಪಿ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳು ಧರಣಿ ಹಾಗೂ ಪ್ರತಿಭಟನೆಗಳ ಮೂಲಕ ದೂರು ಮೂಲಕ ದೂರುಗಳು ಸಲ್ಲಿ‌ಸಿದ್ದಾರೆ, ಆದರೂ ಜನರ ಗೋಳಾಟ ತಪ್ಪಿಲ್ಲ, ಜನಸಾಮಾನ್ಯರ ಹಿತದೃಷ್ಟಿಯಿಂದ ತಕ್ಷಣವೇ ಪಟ್ಟಣದಲ್ಲಿ ಜನ ಸಂಪರ್ಕ ಸಭೆ ಆಯೋಜನೆ ಮಾಡುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ವೀರಣ್ಣ ಯಾರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *