ಕ್ಷಯರೋಗ ಮುಕ್ತ ಭಾರತ-2030ಕ್ಕೆ ಸಹಕಾರ ಅಗತ್ಯ: ಡಾ.ಅನುಪಮಾ ಕೇಶ್ವಾರ

ನಗರದ

ಸುದ್ದಿ ಸಂಗ್ರಹ ಕಲಬುರಗಿ
‘ಕ್ಷಯರೋಗ ಮುಕ್ತ ಭಾರತ-2030’ಕ್ಕೆ ಆರೋಗ್ಯ ಇಲಾಖೆಯ ಜೊತೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಕ್ಷಯರೋಗ ನಿರ್ಮಲನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಾಗೃತಿಯ ಕರಪತ್ರ ವಿತರಿಸಿ, ಮಾತನಾಡಿದ ಅವರು, ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜ್ವರ ಬರುವುದು, ತೂಕದ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಆಗ ಇದರ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಕ್ಷಯ ಸಂಪೂರ್ಣವಾಗಿ ಗುಣಮುಖವಾಗುವಂತಹ ರೋಗವಾಗಿದೆ. ಇದು ರೋಗಿಯು ಸೀನಿದಾಗ ಮತ್ತು ಕೆಮ್ಮಿದಾಗ ಗಾಳಿಯ ಮೂಲಕ ಹರಡುತ್ತದೆ. ಮುಟ್ಟುವುದರಿಂದ, ಕೈ ಕುಲುಕುವುದರಿಂದ ಬರುವುದಿಲ್ಲ. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ಹಸಿರು ತರಕಾರಿ, ಹಾಲು, ಹಣ್ಣು, ಮೊಟ್ಟೆ, ಮೀನು ಸೇವನೆ ಮಾಡಬೇಕು. ಎಣ್ಣೆಯಲ್ಲಿ ಬೇಯಿಸಿದ, ಕರಿದ ಆಹಾರಗಳ ಸೇವನೆ ಬೇಡ ಎಂದು ರೋಗಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿ ಗಂಗಾಜ್ಯೋತಿ ಗಂಜಿ, ಜಗನಾಥ ಗುತ್ತೇದಾರ, ಚಂದ್ರಕಲಾ ಮಠಪತಿ, ಲಕ್ಷ್ಮಿ ಮೈಲಾರಿ, ಅರ್ಚನಾ ಸಿಂಗೆ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *