ಏಪ್ರಿಲ್‌ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ನಿಯಮ ಜಾರಿ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಆದಾಯ ತೆರಿಗೆ ಕಾಯ್ದೆ-2026ರ ಅನುಷ್ಠಾನಕ್ಕೆ ಅಗತ್ಯವಿರುವ ನಿಯಮಗಳ ಅಧಿಸೂಚನೆಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಶುಕ್ರವಾರ ಪ್ರಕಟಿಸಿದೆ.

ಈ ಹೊಸ ನಿಯಮಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವುದು/ಹಿಂಪಡೆಯುವಿಕೆ, ಮೋಟಾರು ವಾಹನಗಳು ಹಾಗೂ ಆಸ್ತಿ ಖರೀದಿ ಮತ್ತು ಹೋಟೆಲ್ ಬಿಲ್‌ಗಳ ಪಾವತಿಗಾಗಿ ಪ್ಯಾನ್ ಉಲ್ಲೇಖಿಸಿ ನಡೆಸಬಹುದಾದ ವಹಿವಾಟು ಮಿತಿಯನ್ನು ಹೊಸ ಕಾಯ್ದೆಯು ಹೆಚ್ಚಿಸಿದೆ.

ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ (ಐ.ಟಿ) ಕಾಯ್ದೆ ಬದಲಿಸಲು, ಸಂಸತ್ತು 2025ರ ಆಗಸ್ಟ್ 12ರಂದು ಹೊಸ ಆದಾಯ ತೆರಿಗೆ ಮಸೂದೆಗೆ ಅಂಗೀಕಾರ ನೀಡಿತ್ತು. ಆಗಸ್ಟ್‌ 21ರಂದು ರಾಷ್ಟ್ರಪತಿಯವರು ಈ ಮಸೂದೆಗೆ ಅಂಕಿತ ಹಾಕಿದ ಬಳಿಕ ಇದು ಕಾಯ್ದೆಯಾಯಿತು.

ಇದು ಯಾವುದೆ ಹೊಸ ತೆರಿಗೆ ದರ ವಿಧಿಸುವುದಿಲ್ಲ. ಸಂಕೀರ್ಣವಾಗಿರುವ ಹಳೆಯ ಆದಾಯ ತೆರಿಗೆ ಕಾಯ್ದೆಯ ಭಾಷೆಯು, ತೆರಿಗೆದಾರರಿಗೆ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ಭಾಷೆಯನ್ನು ಸರಳೀಕರಿಸಲಾಗಿದೆ.

ಹಳೆಯ ಕಾಯ್ದೆಯಲ್ಲಿದ್ದ ಅನಗತ್ಯ ನಿಬಂಧನೆಗಳು ಮತ್ತು ಸಂಕೀರ್ಣ ಭಾಷೆಯನ್ನು ಹೊಸ ಕಾಯ್ದೆಯು ತೆಗೆದುಹಾಕಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 819 ಸೆಕ್ಷನ್‌ಗಳಿದ್ದವು. ಅದು ಈಗ 536ಕ್ಕೆ ಇಳಿದಿದೆ. ಅಧ್ಯಾಯಗಳು ಸಹ 47ರಿಂದ 23ಕ್ಕೆ ಇಳಿದಿವೆ. ಹಳೆಯ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿದ್ದವು. ಅವು ಈಗ 2.6 ಲಕ್ಷಕ್ಕೆ ಕಡಿಮೆ ಆಗಿವೆ. ಕಾಯ್ದೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮೂಡಿಸಲು ಇದೆ ಮೊದಲ ಬಾರಿಗೆ 39 ಹೊಸ ಕೋಷ್ಟಕಗಳು ಮತ್ತು 40 ಹೊಸ ಸೂತ್ರಗಳನ್ನು ಪರಿಚಯಿಸಲಾಗಿದೆ.

ಹೊಸ ನಿಯಮಗಳು ಬಂಡವಾಳ ಗಳಿಕೆ, ಷೇರುಪೇಟೆ ವಿನಿಮಯ ವಹಿವಾಟುಗಳು ಮತ್ತು ಎನ್‌ಆರ್‌ಐಗಳ ತೆರಿಗೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಹೊಂದಿವೆ.

ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ವಿನಾಯಿತಿ ಲೆಕ್ಕ ಹಾಕುವಾಗ ಪ್ರಸ್ತುತ ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ವೇತನದಾರರು ತಮ್ಮ ಸಂಬಳದ ಶೇ.50ರಷ್ಟು ವಿನಾಯಿತಿ ಪಡೆಯಲು ಅವಕಾಶ ಇದೆ.

ಇದೀಗ ಹೊಸ ನಿಯಮಗಳಡಿ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ನಲ್ಲಿನ ವೇತನ ಪಡೆಯುವ ಉದ್ಯೋಗಿಗಳಿಗೆ ಸಹ ಈ ಪ್ರಯೋಜನ ದೊರೆಯಲಿದೆ. ಉಳಿದ ಪ್ರದೇಶದಲ್ಲಿನ ವೇತನದಾರರು ಶೇ 40ರಷ್ಟು ಮಿತಿಗೆ ಅರ್ಹರಾಗಿದ್ದಾರೆ.

ಆದಾಯ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಬಾಡಿಗೆದಾರ-ಭೂಮಾಲೀಕರ ಸಂಬಂಧವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

50 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡುವಾಗಲೆಲ್ಲ ಪ್ಯಾನ್‌ ಸಂಖ್ಯೆ ಉಲ್ಲೇಖಿಸುವ ಬದಲು, ವ್ಯಕ್ತಿಯೊಬ್ಬನ ಕಡೆಯಿಂದ ಆಗುವ ವಾರ್ಷಿಕ ಒಟ್ಟು ಜಮೆ ಮೊತ್ತ ಅಥವಾ ಹಣ ಹಿಂಪಡೆಯುವ ಮೊತ್ತವು 10 ಲಕ್ಷ ಮೀರಿದ್ದರೆ ಮಾತ್ರ ಪ್ಯಾನ್‌ ಉಲ್ಲೇಖ ಕಡ್ಡಾಯ ಎಂದು ಹೇಳಲಾಗಿದೆ.

ಕ್ರಿಪ್ಟೊ ವಿನಿಮಯ ಕೇಂದ್ರಗಳು ತಮ್ಮಲ್ಲಿನ ಕೆಲವು ಮಾಹಿತಿಗಳನ್ನು ತೆರಿಗೆ ಇಲಾಖೆಯ ಜೊತೆ ಹಂಚಿಕೊಳ್ಳುವುದು ಕಡ್ಡಾಯ ಎಂದು ನಿಯಮಗಳಲ್ಲಿ ಹೇಳಲಾಗಿದೆ. ಅಲ್ಲದೆ, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯು (ಸಿಬಿಡಿಸಿ) ಒಪ್ಪಿತ ಎಲೆಕ್ಟ್ರಾನಿಕ್‌ ಪಾವತಿ ವಿಧಾನಗಳಲ್ಲಿ ಒಂದು ಎಂದು ಹೇಳಿದೆ.

ದ್ವಿಚಕ್ರ ವಾಹನ ಸೇರಿದಂತೆ 5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಯಾವುದೆ ಮೋಟಾರು ವಾಹನ ಖರೀದಿಸುವಾಗ ಪ್ಯಾನ್‌ ಉಲ್ಲೇಖಿಸುವುದು ಕಡ್ಡಾಯ ಆಗುತ್ತದೆ.

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ಬಿಲ್‌ ಮೊತ್ತ, ಸಭಾಭವನಗಳಿಗೆ ಅಥವಾ ಬ್ಯಾಂಕ್ವೆಟ್‌ ಹಾಲ್‌ಗಳಿಗೆ ಅಥವಾ ಕಾರ್ಯಕ್ರಮ ನಿರ್ವಹಣೆ ಮಾಡುವ ವ್ಯಕ್ತಿಗೆ ಮಾಡುವ ಪಾವತಿ ಮೊತ್ತ 1 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ಯಾನ್‌ ಸಂಖ್ಯೆ ನಮೂದು ಕಡ್ಡಾಯ ಆಗಲಿದೆ. ಈಗಿರುವ ನಿಯಮಗಳ ಪ್ರಕಾರ ಹೋಟೆಲ್‌ ಅಥವಾ ರೆಸ್ಟೋರೆಂಟ್‌ ಶುಲ್ಕವು 50 ಸಾವಿರಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆ ಉಲ್ಲೇಖಿಸಬೇಕಾಗುತ್ತದೆ.

ತೆರಿಗೆ ವಂಚನೆ ಪತ್ತೆಗೆ ತಂತ್ರಜ್ಞಾನ ಬಳಸಿ: ನಿರ್ಮಲಾ ಸೀತಾರಾಮನ್

ನವದೆಹಲಿ (ಪಿಟಿಐ): ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸುವವರನ್ನು ಪತ್ತೆ ಹಚ್ಚಲು ತಂತ್ರಜ್ಞಾನವನ್ನು ಬಳಸುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.

ಆದಾಯ ತೆರಿಗೆ ಕಾಯ್ದೆ-2025ರ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್‌ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಭಾರತವನ್ನು ಅತ್ಯಂತ ತೆರಿಗೆ ಸ್ನೇಹಿ ರಾಷ್ಟ್ರವಾಗಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ಇಲಾಖೆಯು, ಪ್ರಾಮಾಣಿಕ ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲಿದೆ. ಆದರೆ, ನೀವು ತೆರಿಗೆ ವಂಚನೆ ಮಾಡಿದರೆ, ವ್ಯವಸ್ಥೆಯು ನಿಮ್ಮನ್ನು ಪತ್ತೆ ಹಚ್ಚಲಿದೆ ಎಂದರು.

ಸ್ಥಳೀಯ ಭಾಷೆಗಳಲ್ಲಿ ಹೊಸ ತೆರಿಗೆ ಕಾಯ್ದೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ದೇಶದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ತೆರಿಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *