ಕುಟುಂಬದಿಂದ ಬಾಹ್ಯಾಕಾಶದವರೆಗೆ ಮಹಿಳೆಯರ ಸಾಧನೆ ಗಮನಾರ್ಹ: ಜ್ಯೋತಿ ಮರಗೋಳ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಮಹಿಳೆಯ ಬುದ್ಧಿಶಕ್ತಿ, ತಾಳ್ಮೆ ಮತ್ತು ವಿಶ್ಲೇಷಣಾ ಸಾಮರ್ಥ್ಯದಿಂದ ಕುಟುಂಬದಿಂದ ಬಾಹ್ಯಾಕಾಶದವರೆಗೂ ಗಮನಾರ್ಹ ಸಾಧನೆ ಮಾಡುತ್ತಿದ್ದು, ಸಂಪ್ರದಾಯಗಳ ಸಂಕೋಲೆಯಿಂದ ಮುಕ್ತಗೊಂಡು ಜಾಗತಿಕ ಮನ್ನಣೆ ಪಡೆಯುವಂತಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಿಳಾ ಮಹಾಸಭಾದ ಜಿಲ್ಲಾಧ್ಯಕ್ಷೆ ಜ್ಯೋತಿ ಮರಗೋಳ ಹೇಳಿದರು.

ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಅಪಾರ, ಮಹಿಳೆಯರು ಕೇವಲ ಅದೃಷ್ಟದಿಂದ ಸಾಧನೆ ಮಾಡುವವರಲ್ಲ. ಬದಲಾಗಿ ತಮ್ಮ ಶ್ರಮ ಮತ್ತು ಛಲದಿಂದ ಗುರಿ ತಲುಪುತ್ತಿದ್ದಾರೆ. ಮಹಿಳೆಗೆ ಗೌರವ ನೀಡುವ ಸಮಾಜವೇ ನಿಜವಾದ ಸುಸಂಸ್ಕೃತ ಸಮಾಜ,
ಸ್ತ್ರೀಯರನ್ನು ಗೌರವಿಸುವ ದೇಶದಲ್ಲಿಂದು ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ಭ್ರೂಣಹತ್ಯೆ ಸಲ್ಲದು ಎಂದರು.

ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ್ ಮಾತನಾಡುತ್ತ, ಮಹಿಳೆಯರು ಜಾಗೃತರಾದಾಗ ಮಾತ್ರ ಸ್ವಾವಲಂಬಿ ಜೀವನ ನಡೆಸಬಹುದು, ಮಹಿಳೆಯರು ಪುರುಷರಷ್ಟೆ ಸಮಾನವಾಗಿ ಕೆಲಸ ಮಾಡುತ್ತಾರೆ, ಮಹಿಳೆಯರಿಗೆ ಸಮಾನತೆ ಬರಬೇಕಾದರೆ ಕುಟುಂಬದ ಸಹಕಾರ ಇರಬೇಕು, ಮಹಿಳೆಯರಿಗೆ ಕುಟುಂಬದ ಜೊತೆಗೆ ಹೆಚ್ಚಿನ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುತ್ತಾರೆ. ಅವರಿಗೆ ಆ ಗುಣ ದೈವದಿಂದ ಪಡೆದುಬಂದಿದ್ದಾರೆ. ಅವರು ಕುಟುಂಬ ನಿರ್ವಹಿಸಿ, ವೃತ್ತಿ ಜೀವನದಲ್ಲೂ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಂಗಲಾ ಚಕ್ರವತಿ ಮಾತನಾಡಿ, 21ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ, ಆಕೆ ಸಾಧನೆಯ ಸಾಕಾರಮೂರ್ತಿಯಾಗಿದ್ದಾಳೆ ಎಂದರು.

ರೇಣುಕಾ ನಾನಾಗೌಡ, ಲಕ್ಷ್ಮಿಬಾಯಿ ರಾವೂರ ಮತ್ತು ಅನುಸೂಯಾ ಹೂಗಾರ ವೇದಿಕೆಯಲ್ಲಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ವರಿ ಧನಶೆಟ್ಟಿ ವಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೀರಶೈವ ಸಮಾಜದ ಮಹಿಳೆಯರಿಗೆ ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಅಂಬಿಕಾ ಸಾತ್ಯಾಳ, ಅನುಷಾ ಇಟಗಿ, ಅಕ್ಷರಾ ವಳಸಂಗ, ಭಾಗಶ್ರೀ, ಶ್ವೇತಾ ಕುಂಬಾರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ದಾನೇಶ್ವರಿ ವಾರಕರ, ಭಾಗ್ಯಶ್ರೀ ಹೂಗಾರ ಇವರನ್ನು ಸನ್ಮಾನಿಸಲಾಯಿತು.

ವೀರಶೈವ ಸಮಾಜದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಉದ್ಯಮಿ ಅಣವೀರ ಇಂಗನಶೆಟ್ಟಿ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಪ್ರಮುಖರಾದ ಈರಣ್ಣ ವಾಲಿ, ರಾಜು ಬೆಳಗುಂಪಿ, ಬಸವರಾಜ ಸಾತ್ಯಾಳ, ಶಿವಾನಂದ ಪಾಟೀಲ, ಮಹಾನಂದ ಕುಂಬಾರ, ಜಯಶ್ರೀ ಪಸಾರ, ಜಗದೇವಿ ಪಾಟೀಲ್ ಮತ್ತು ವೀರಶೈವ ಸಮಾಜದ ಮುಖಂಡರು, ಮಹಿಳೆಯರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರೂಪಾ ಅಂದೇಲಿ ನಿರೂಪಿಸಿದರು, ಆರತಿ ಸಾತ್ಯಾಳ ವಂದಿಸಿದರು.

Leave a Reply

Your email address will not be published. Required fields are marked *