ಸುದ್ದಿ ಸಂಗ್ರಹ ಕಲಬುರಗಿ
ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಅನುಭವದ ಅಮೃತದ ವಚನಗಳು ಸಾರ್ವಕಾಲಿಕ ಮತ್ತು ಸಮಾಜಕ್ಕೆ ದಾರಿದೀಪವಾಗಿವೆ. ವಿದ್ಯಾರ್ಥಿ ದಿಸೆಯಿಂದಲೆ ವಚನಗಳ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ ಬಟಗೇರಿ ಹೇಳಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.
ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ್ ಮಾತನಾಡಿ, 12ನೇ ಶತಮಾನದಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರು ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಅವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳು ಬರೆದಿರುವುದು ಗೋಚರಿಸುತ್ತದೆ. ‘ಅಂಬಿಗರ ಚೌಡಯ್ಯ’ ಎಂಬುದೆ ಅವರ ವಚನಗಳ ಅಂಕಿತವಾಗಿದೆ. ತಾವು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವರು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಸ್ಮಾ ಜಬೀನ್, ಸುವರ್ಣಲತಾ ಭಂಡಾರಿ, ನಯಿಮಾ ನಾಹಿದ್, ಮಲ್ಲಿಕಾರ್ಜುನ ದೊಡ್ಡಮನಿ, ಮಲ್ಲಪ್ಪ ರಂಜಣಗಿ, ದ್ವಿದಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕರಾದ ವಿರೇಶ್ ಗೋಗಿ, ನಾರಾಯಣಸ್ವಾಮಿ, ಶರಣು ಸುರಪುರ, ಅಲಿಯಾ ತಬಸ್ಸುಮ್ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.