ನವದೆಹಲಿ: ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವಿಳಂಬವನ್ನು ತಪ್ಪಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ನಡುವೆ ಏಕೀಕೃತ ವಿತರಣಾ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು ಹೊಸ ‘ಎಲ್‌ಪಿಜಿ ಇಂಟರ್- ಆಪರೆಬಲ್ ಸರ್ವೀಸ್ ಡೆಲಿವರಿ ಫ್ರೇಮ್‌ವರ್ಕ್’ ಪರಿಕಲ್ಪನೆಯಡಿ ಈ ಉಪಕ್ರಮ ಜಾರಿಗೊಳಿಸಲು ಮುಂದಾಗಿದ್ದು, ಇದರ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ.
ಪ್ರಸ್ತಾವಿತ ನೀತಿಯ ಅಡಿಯಲ್ಲಿ, ಮೂರು ಸರಕಾರಿ ಸ್ವಾಮ್ಯದ ಕಂಪನಿಗಳಾದ ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ಅವು ಒಂದೆ ರಾಷ್ಟ್ರೀಯ ನೆಟ್‌ವರ್ಕ್ ನ ಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿದಾಗ ನಿರ್ದಿಷ್ಟ ಕಂಪನಿಯ ವಿತರಕರು, 24 ಗಂಟೆಯೊಳಗೆ ಸಿಲಿಂಡರ್ ಪೂರೈಸಲು ಸಾಧ್ಯವಾಗದಿದ್ದರೆ, ಆ ಆರ್ಡರ್ ಸ್ವಯಂಚಾಲಿತವಾಗಿ ಇತರ ಯಾವುದೆ ಹತ್ತಿರದ ವಿತರಕ ಕಂಪನಿಯ ಡೀಲರ್‌ಗೆ ವರ್ಗಾವಣೆಯಾಗುತ್ತದೆ. ಇತರೆ ದೇಶಗಳಲ್ಲಿ ಇದೆ ರೀತಿಯ ಮಾದರಿ ಜಾರಿಯಲ್ಲಿದ್ದು, ಅದನ್ನೆ ಭಾರತದಲ್ಲೂ ಅನುಸರಿಸಲು ‘ಪೆಟ್ರೋಲಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ’ ನಿರ್ಧರಿಸಿದೆ.
ದೇಶದಲ್ಲಿ ಇದೆ ಮೊದಲ ಬಾರಿಗೆ ಸಿಲಿಂಡರ್ ಡೆಲಿವರಿಗೆ ಗ್ರಾಹಕರು ಕಂಪನಿಗಳನ್ನು ಬದಲಾಯಿಸುವ ಆಯ್ಕೆ ದೊರಯಲಿದೆ. ‘‘ಕ್ರಾಂತಿಕಾರಿ ನೀತಿಯು ಮೂರು ಪ್ರತ್ಯೇಕ ಕಂಪನಿಗಳ ರಾಷ್ಟ್ರೀಯ ಎಲ್‌ಪಿಜಿ ವಿತರಣೆಯನ್ನು ಏಕೀಕೃತ ವ್ಯವಸ್ಥೆಯನ್ನಾಗಿಸಲಿದೆ,’’ ಎಂದು ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ತಿಳಿಸಿದೆ.
ಉತ್ತಮ ಉದ್ದೇಶ
ಹೊಸ ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿ ಫ್ರೇಮ್‌ವರ್ಕ್ ಅಡಿ, ಗ್ರಾಹಕರಿಗೆ ಇನ್ನುಮುಂದೆ ತಾವು ಬುಕ್ ಮಾಡಿದ ಸಿಲಿಂಡರ್ 24 ಗಂಟೆಗಳೊಳಗೆ ಗ್ಯಾಸ್ ಸಿಲಿಂಡರ್ ತಮ್ಮ ಮನೆಯನ್ನು ತಲುಪುವ ಗ್ಯಾರಂಟಿ ದೊರೆಯಲಿದೆ. ಪ್ರಸ್ತುತ ಇರುವ 48 ಗಂಟೆಗಳ ನಿಯಮವನ್ನು ಇದು ಬದಲಾಯಿಸುತ್ತದೆ. ಗ್ರಾಹಕರಿಗೆ ವೇಗದ ಮತ್ತು ಪರಿಣಾಮಕಾರಿ ಸೇವೆ ಒದಗಿಸುವುದೆ ಇದರ ಉದ್ದೇಶವಾಗಿದೆ.