ಬೆಂಗಳೂರು: ಹಣ ಮಾಡೋದಕ್ಕೆ ಅಡ್ಡದಾರಿ ಹಿಡಿಯೋ ಸೈಬರ್ ವಂಚಕರು ಈ ಬಾರಿ ಬಳಸಿದ್ದು ನ್ಯಾಯಾಧೀಶರ ಹೆಸರನ್ನು. ಅಚ್ಚರಿ ಅನಿಸಿದ್ದರು ಇದು ನಿಜ. ಲೋಕಾಯುಕ್ತ ಜಸ್ಟೀಸ್ ಹೆಸರಲ್ಲಿ ಅಧಿಕಾರಿಗಳಿಗೆ ಫೋನ್ ಮಾಡಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಫೋನ್ ಮಾಡಿ ನಿಮ್ಮ ಇಲಾಖೆಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ನಿಮ್ಮ ಮೇಲಿನ ಆರೋಪಿಗಳಿಂದ ರೇಡ್ ಮಾಡ್ತಿವಿ ಅಂತ ಬೆದರಿಸೋಕೆ ಶುರು ಮಾಡಿದ್ದಾರೆ. ಟ್ರೂ ಕಾಲರ್‌ನಲ್ಲಿ ಲೋಕಾಯುಕ್ತ ಜಸ್ಟೀಸ್ ಹೆಸರು ಬಳಸಿ ಕರೆ ಮಾಡಿದ್ದಾರೆ. ಇದರಿಂದ ಕರೆ ಸ್ವೀಕರಿಸಿದ ಸರ್ಕಾರಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.
ಮಹಾ ವಂಚಕರು ಮಾಡುತ್ತಿದ್ದಿದ್ದು ಏನು ?
ಈ ವಂಚಕರು ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ನಾನು ಲೋಕಾಯುಕ್ತ ಜಸ್ಟೀಸ್ ಬಿ.ಎಸ್ ಪಾಟೀಲ್ ಹಾಗೂ ಉಪಯೋಕಾಯುಕ್ತ ಫಣೀಂದ್ರ ಎಂದು ಕರೆ ಮಾಡುವ ಅಪರಿಚಿತರು. ಇಂಪಾರ್ಟೆಂಟ್ ಕಾಲ್, ಜಸ್ಟೀಸ್ ಅವರೆ ಕರೆ ಮಾಡಿದ್ದಾರೆಂದು ತಕ್ಷಣ ರಿಸೀವ್ ಮಾಡುವ ಸರ್ಕಾರಿ ಅಧಿಕಾರಿಗಳು, ನಂತರ ಅವರು ಕಾರ್ಯನಿರ್ವಹಿಸುವ ಡಿಪಾರ್ಟ್ಮೆಂಟ್’ನಲ್ಲಿ ಏನೇನು ಕೆಲಸ ನಡೆಯುತಿದೆ ಎಂದು ತಿಳಿದುಕೊಳ್ಳುವ ಅಪರಿಚಿತರು ಬಳಿಕ ಹೆದರಿಸುತ್ತಿದ್ದರು. ನಿಮ್ಮ ಮೇಲೆ ಲಂಚ ಸ್ವೀಕಾರದ ಆರೋಪ ಬಂದಿದೆ ಎಂದು ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲದೆ ಲೋಕಾಯುಕ್ತ ದಾಳಿ ತಡೆಯಬೇಕು ಎಂದರೆ ಇಂತಿಷ್ಟು ಹಣ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ. ಇದೆ ರೀತಿ ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)ಗೂ ಕರೆ ಮಾಡಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ.
ಎಇಇ ವೆಂಕಟೇಶ್‌ಗೆ ಕರೆ ಮಾಡಿ ಸಿಕ್ಕಿಬಿದ್ದರು
ಅಧಿಕಾರಿಗಳನ್ನು ಬೆದರಿಸುತ್ತಿದ್ದ ಖತರ್ನಾಕ್‌ಗಳು ಎಇಇ ವೆಂಕಟೇಶ್ ಅವರಿಗೂ ಕರೆ ಮಾಡಿದ್ದರು. ಮೊದಲಿಗೆ ಕೆರೆಯನ್ನು ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಕರೆ ಮಾಡಿದಾಗ ಬೆದರಿಕೆ ಬಂದಿದೆ. ಇದರಿಂದ ಅನುಮಾನಗೊಂಡು ನೇರವಾಗಿ ಲೋಕಾಯುಕ್ತ ಕಚೇರಿಗೆ ವೆಂಕಟೇಶ್ ಬಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಕಾಲ್ ಬಂದಿದ್ದ ನಂಬರ್ ಜಸ್ಟೀಸ್ ಬಿ.ಎಸ್ ಪಾಟೀಲ್ ಹಾಗೂ ಉಪಲೋಕಾಯುಕ್ತ ಫಣೀಂದ್ರ ಅವರದ್ದಲ್ಲ ಅನ್ನೋದು ಗೊತ್ತಾಗಿದೆ. ಜಸ್ಟೀಸ್ ಹೆಸರು ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗ್ತಿದೆ ಎಂದು ತಿಳಿದುಬಂದಿದೆ. ಜಸ್ಟೀಸ್‌ಗಳ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಹೆಸರು ದುರ್ಬಳಕೆ ಮಾಡಿರುವ ಹಿನ್ನಲೆ ಅವರ ಪರವಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ದೂರು ನೀಡಿದ್ದಾರೆ.