ನವದೆಹಲಿ: ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವಾಲಯವು ಎಸ್‌ಡಿಆರ್‌ಎಫ್‌ನಿಂದ 2ನೇ ಕಂತಿನ ಹಣ ಬಿಡುಗಡೆ ಮಾಡಿದೆ. ನೈಋತ್ಯ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು 1,950 ಕೋಟಿ ಮುಂಗಡೆಯಾಗಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಅಮಿತ್ ಶಾ ಅವರು ಕನ್ನಡಲ್ಲೇ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕಕ್ಕೆ ಕೇವಲ 384.40 ಕೋಟಿ ರೂ.ಸಿಕ್ಕಿದ್ದರೆ, ಮಹಾರಾಷ್ಟ್ರಕ್ಕೆ ಬರೋಬ್ಬರಿ 1,566.40 ಕೋಟಿ ರೂ. ನೀಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಪತ್ತುಗಳ ಸಂದರ್ಭದಲ್ಲೂ, ಅದರ ನಂತರವೂ ಜನರ ಜೊತೆಯೇ ಮೋದಿ ಸರ್ಕಾರ ನಿಂತಿದೆ. ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ SDRF ನ ಕೇಂದ್ರ ಪಾಲಿನ ಎರಡನೇ ಕಂತಾಗಿ ರೂ. 1,950.80 ಕೋಟಿಯನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಈ ವರ್ಷ ಅತಿವೃಷ್ಠಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ಈ ನಿಧಿಯನ್ನು ಬಳಸಲಾಗುವುದು. ಈ ವರ್ಷ ಕೇಂದ್ರ ಸರ್ಕಾರವು SDRF ಅಡಿಯಲ್ಲಿ 27 ರಾಜ್ಯಗಳಿಗೆ ರೂ. 13,603.20 ಕೋಟಿ ಮತ್ತು NDRF ಅಡಿಯಲ್ಲಿ 15 ರಾಜ್ಯಗಳಿಗೆ ರೂ. 2,189.28 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ನೈರುತ್ಯ ಮುಂಗಾರಿನಿಂದ ತೀವ್ರ ಹಾನಿಗೊಳಗಾದ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ 384.0 ಕೋಟಿ ರೂ ಹಾಗೂ ಮಹಾರಾಷ್ಟ್ರಕ್ಕೆ 1566.40 ಕೋಟಿ ರೂ ನೀಡಲಾಗಿದೆ. ಪ್ರವಾಹ ಭೂಕುಸಿತ ಮೇಘಸ್ಫೋಟಕ್ಕೆ ಒಳಗಾದ ರಾಜ್ಯಗಳಿಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಲಹೆಯಂತೆ ಕೇಂದ್ರ ಸರ್ಕಾರ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಸ್ ಡಿಆರ್ ಎಫ್ ನ ಅಡಿಯಲ್ಲಿ ಕೇಂದ್ರದ ಪಾಲಾದ 13,603.20 ಕೋಟಿ ರೂ. 27 ರಾಜ್ಯಗಳಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ (ಎನ್ ಡಿಆರ್ ಎಫ್) ಅಡಿಯಲ್ಲಿ 15 ರಾಜ್ಯಗಳಿಗೆ 2,189.28 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರವು ಈ ವರ್ಷ ಬಿಡುಗಡೆ ಮಾಡಿದೆ. ಇದಲ್ಲದೆ ಹೆಚ್ಚುವರಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ ಡಿಆರ್ ಎಫ್) ಅಡಿಯಲ್ಲಿ 21 ರಾಜ್ಯಗಳಿಗೆ 4,571.30 ಕೋಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ ಎಫ್) ಅಡಿಯಲ್ಲಿ 9 ರಾಜ್ಯಗಳಿಗೆ 372.09 ಕೋಟಿ ರೂ. ನೆರವು ನೀಡಲಾಗಿದೆ.