ನಕಲಿ ಅಂಗವಿಕಲರ ಕಾರ್ಡ್‌: ಶಿರಾ ಆಸ್ಪತ್ರೆ ನಂಟು ?

ಜಿಲ್ಲೆ

ಶಿರಾ: ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ ಅಂಗವಿಕಲರ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ್ದ ಜಯದೇವ್ ಎಂಬ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂಗವಿಕಲರ (ಯುಡಿ ಐಡಿ) ಕಾರ್ಡ್ ವಿತರಿಸಿದ ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಡೇಟಾ ಆಪರೇಟರ್ ನಾಗರಾಜು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾದ ಕೆಲವು ವೈದ್ಯರ ವಿಚಾರಣೆ ನಡೆಸಿದ್ದಾರೆ.

ಹಿರಿಯೂರು ತಾಲೂಕಿನ ಜಯದೇವ್, ಶಿರಾ ತಾಲೂಕಿನ‌ ಮದ್ದೇನಹಳ್ಳಿ ಗ್ರಾಮದ ವಿಳಾಸ ನೀಡಿ ಅಂಗವಿಕಲರ ಕಾರ್ಡ್‌ ಪಡೆದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಪೊಲೀಸರು ಶಿರಾ ಆಸ್ಪತ್ರೆಯ ಅಂಗವಿಕಲರ ಕಾರ್ಡ್‌ ನೀಡುವ ತಂಡದಲ್ಲಿದ್ದ ವೈದ್ಯರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅವರು ನೀಡಿದ ಹೇಳಿಕೆ ಆಧಾರದ ಮೇಲೆ ಆಸ್ಪತ್ರೆಯ ಡೇಟಾ ಆಪರೇಟರ್ ನಾಗರಾಜು ಅವರನ್ನು ವಶಕ್ಕೆ‌ ಪಡೆದು ತನಿಖೆ‌ ಮುಂದುವರೆಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ 2025ನೇ ಸಾಲಿನ ಯುಜಿ ಸಿಇಟಿ ಮತ್ತು ಯುಜಿ ನೀಟ್ ಸೀಟ್‌ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆಯಲು ಕೆಲವರು ಅಂಗವಿಕಲರ ಕೋಟಾದಡಿ ಅರ್ಜಿ ಸಲ್ಲಿಸಿದ್ದರು.‌ ಆ ಪೈಕಿ ಹೆಚ್ಚಿನವರು ಮೂಲ ಅರ್ಜಿಯಲ್ಲಿ ಮೀಸಲಾತಿ ಕೋರದೆ ನಂತರ ಅರ್ಜಿ ತಿದ್ದುಪಡಿ ಮೂಲಕ ತಮಗೆ ಶ್ರವಣ ದೋಷದಿಂದ ಅಂಗವಿಕಲರ ಕೋಟಾದಡಿ ವೈದ್ಯಕೀಯ ಸೀಟು ಕೋರಿದ್ದರು.‌

ಮೆರಿಟ್ ಪ್ರಕಾರ ಸೀಟ್ ಹಂಚಿಕೆ ಮಾಡಿ ಅಭ್ಯರ್ಥಿಗಳನ್ನು ವೈದ್ಯಕೀಯ ತಪಾಸಣೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಕ್ಟೋರಿಯಾ ಆಸ್ಪತ್ರೆಯ ಇ.ಎನ್.ಟಿ ವಿಭಾಗದ ವೈದ್ಯಕೀಯ ಅಧೀಕ್ಷಕರ ಕಚೇರಿಗೆ ಕಳುಹಿಸಲಾಗಿತ್ತು. ಅಭ್ಯರ್ಥಿಗಳ ಪರೀಕ್ಷೆ ನಡೆಸಿ ಅಂಗವಿಕಲತೆಯ ನೈಜತೆ ಬಗ್ಗೆ ಅನುಮಾನಗೊಂಡು ಅಭ್ಯರ್ಥಿಗಳನ್ನು ಆಡಿಯೋಗ್ರಾಂ ಮತ್ತು ಬೆರಾ ಪರೀಕ್ಷೆಗೆಂದು ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು.

ಅಲ್ಲಿ‌ ಸಹ ತಪಾಸಣೆ ವೇಳೆ ಅಂಗವಿಕಲತೆಯ ನೈಜತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿತ್ತು. ಪ್ರಾಧಿಕಾರದ ಆಡಳಿತಾಧಿಕಾರಿ ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ 21 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ವಿಚಾರವಾಗಿ ನನಗೆ ಯಾವುದೆ ಮಾಹಿತಿ ಇಲ್ಲ. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳನ್ನು ಕೇಳಿ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್ವರ್ ಪ್ರತಿಕ್ರಿಯಿಸಿದರು.

‘ನಕಲಿ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅಂಗವಿಕಲರ ಕಾರ್ಡ್‌ ವಿತರಣೆ ತಂಡದಲ್ಲಿದ್ದ ವೈದ್ಯರಿಗೆ ನೋಟಿಸ್‌ ನೀಡಿ ತನಿಖೆಗೆ ಸಹಕರಿಸುವಂತೆ ಕೋರಿದ್ದರು. ವಿಚಾರಣೆ ಸಮಯದಲ್ಲಿ ಎಲ್ಲಾ ಮಾಹಿತಿ ಮತ್ತು ದಾಖಲೆ ನೀಡಿದ್ದು ತನಿಖೆ ಮುಂದುವರೆದಿದೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *