ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಪತ್ತೆಯಾಗಿದ್ದ ನ್ಯುಮೋನಿಯಾ ಮಾದರಿಯ ವೈರಸ್ ವಿಶ್ವವನ್ನೆ ಆತಂಕಕ್ಕೆ ದೂಡಿತ್ತು. ನಿರ್ಲಕ್ಷ್ಯ ವಹಿಸಿದರೆ ಇದರಿಂದ ಭಾರತಕ್ಕೂ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸಿದ್ದರು. ಅದಕ್ಕಿಂತಲೂ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡಿರುವ ಮೆದುಳು ತಿನ್ನುವ ಅಮೀಬಾ ಸೋಂಕು ಜನರ ನಿದ್ದೆಗೆಡಿಸಿದೆ.
1962ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಹರಿಯಾಣದ ರೋಹ್ಟಕ್ನಲ್ಲಿ. ಆದರೆ ಇತ್ತೀಚಿನ ದಿನಗಳಲ್ಲಿ ನದಿ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಇದೆ ವರ್ಷ 19 ಜನರನ್ನು ಬಲಿ ಪಡೆದುಕೊಂಡಿದೆ. ಈ ವರ್ಷ 3 ತಿಂಗಳ ಶಿಶುವಿನಿಂದ 91 ವರ್ಷದ ವರೆಗಿನ ವೃದ್ಧನಲ್ಲಿಯೂ ಸೇರಿ ಒಟ್ಟು 61 ಪ್ರಕರಣಗಳು ವರದಿಯಾಗಿದ್ದು, 19 ಜನರನ್ನು ಬಲಿ ಪಡೆದಿದೆ. ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಸಾವಿನ ಸಂಖ್ಯೆ ಹೆಚ್ಚಳ ಆತಂಕಕ್ಕೆ ಕಾರಣವಾಗಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಕೊಳ, ಕೆರೆ, ತೊರೆಗಳಲ್ಲಿ ಸ್ನಾನ ಮಾಡದಂತೆ ಜನಕ್ಕೆ ಎಚ್ಚರಿಕೆ ನೀಡಿದ್ದು, ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಲು ತಿಳಿಸಲಾಗಿದೆ.
ಅಷ್ಟಕ್ಕೂ ಈ ಮೆದುಳು ತಿನ್ನುವ ಅಮೀಬಾ ಎಂದರೇನು ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ? ಇದರ ಮರಣ ಪ್ರಮಾಣ ಎಷ್ಟಿದೆ ? ಎಂಬುದಕ್ಕೆಲ್ಲ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ, ಅದಕ್ಕೂ ಈ ವೈರಸ್ಗಳಿಗೆ ಏಕೆ ಸಾವಿಲ್ಲ ಎಂಬುದ್ನ ತಿಳಿಯೋಣ
ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ ?
ವೈರಸ್ ಅಂದರೆ ಪರಾವಲಂಬಿಯಾಗಿರುವ ಅತ್ಯಂತ ಸೂಕ್ಷ್ಮಾಣು ಜೀವಿ. ಮೆದುಳು ತಿನ್ನುವ ಅಮೀಬಾ ಸೋಂಕು ಕೂಡ ಇತರ ಜೀವಿಗಳಂತೆ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರು ಗುರುತಿಸಿರುವಂತೆ ಸುಮಾರು 1 ಸಾವಿರ ವೈರಸ್ಗಳು ಕಂಡುಬಂದಿವೆ. ಆದರೆ ಅದರಲ್ಲಿ ಸಬ್ ವೇರಿಯಂಟ್ಗಳು (ರೂಪಾಂತರಿ) ಸಾಕಷ್ಟು ಇವೆ. ಅವುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆ. ಸಾವಿನ ಪ್ರಮಾಣದ ತೀವ್ರತೆ ಎಷ್ಟಿರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಹೆಸರುಗಳನ್ನ ಕೊಡುತ್ತಾರೆ. ನಂತರ ಈ ವೈರಸ್ ಬಂದ್ರೆ ಹೊಸದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಒಂದು ವೈರಸ್ ಬಂದ ನಂತರ ಅವು ಮತ್ತೆ ಸಾಯುವುದಿಲ್ಲ. ಬದುಕುವುದಕ್ಕಾಗಿ ಹೊಸ ಹೊಸ ರೂಪಗಳನ್ನ ಪಡೆದುಕೊಳ್ಳುತ್ತವೆ. ಅವು ಮಾನವನ ಜೀವಕೋಶಗಳ ಮೇಲೆ ಅವಲಂಬಿತವಾಗುತ್ತವೆ. ನಮ್ಮ ಜೀವಕಣಗಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾದ್ರೆ ಯಾವುದೆ ಸಮಸ್ಯೆ ಕಂಡುಬರುವುದಿಲ್ಲ. ಇಲ್ಲದಿದ್ದರೆ ಪ್ರಾಣಾಪಾಯ ಉಂಟುಮಾಡುತ್ತದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಚಾಮರಾಜನಗರ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ.

ನೆಗ್ಲೇರಿಯಾ ಫೌಲೆರಿ ಎಂದರೇನು ?
ಮೆದುಳು ತಿನ್ನುವ ಅಮೀಬಾ ಬಗ್ಗೆ ನೋಡೋದಾದರೆ ಇದನ್ನು ನೆಗ್ಲೇರಿಯಾ ಫೌಲೆರಿ ಎಂಬ ಹೆಸರಿನಿಂದ ಕರೆಯುತ್ತಾರೆ. ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.
ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

ರೋಗದ ಲಕ್ಷಣವೇನು ?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಮತ್ತು ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.
ಭಾರತದಲ್ಲಿ ಭೀತಿ
ವರದಿಗಳ ಪ್ರಕಾರ 1962ರಲ್ಲಿ ಕಂಡುಬಂದ ಈ ವೈರಸ್ ವಿದೇಶಗಳಲ್ಲೂ ಆತಂಕ ಹುಟ್ಟಿಸಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ಟಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿತ್ತು. ಬಳಿಕ ನದಿ, ಕೆರೆ, ತೊರೆಗಳು ಹೆಚ್ಚಾಗಿರುವ ಕೇರಳದಲ್ಲಿ ಕಂಡುಬಂದಿದೆ.

ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ?
- ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.
- ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗಬೇಡಿ
- ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್ಗಳನ್ನು ಬಳಸಿ
- ಬಾವಿ ಮತ್ತು ನೀರಿನ ಟ್ಯಾಂಕ್ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು ಉತ್ತಮ
- ಒಂದೊಮ್ಮೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಚಿಕಿತ್ಸೆ ಏನು ?
ವೈದ್ಯಕೀಯ ಲೋಕ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದ್ರೆ ಈವರೆಗೂ ಯಾವೊಂದು ವೈರಸ್ಗಳನ್ನ ಸಂಪೂರ್ಣವಾಗಿ ನಿಯಂತ್ರಣ ಮಾಡುವ ಯಾವುದೇ ಔಷಧವನ್ನೂ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ ಸದ್ಯ ಜನರನ್ನ ಕಾಡುತ್ತಿರುವ ಮೆದುಳು ತಿನ್ನುವ ಅಮೀಬಾದಿಂದ ಮರಣ ಪ್ರಮಾಣ ಕೊಂಚ ತಡೆಯುವ ಪ್ರಯತ್ನದ ಭಾಗವಾಗಿ ಕೇರಳ ಆರೋಗ್ಯ ಇಲಾಖೆ ಔಷಧವೊಂದನ್ನು ಕಂಡುಕೊಂಡಿದೆ.
ಕೇರಳದಲ್ಲಿ ಪತ್ತೆಯಾದ 69 ಪ್ರಕರಣಗಳ ಪೈಕಿ 19 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಗಮನಾರ್ಹವೆಂದ್ರೆ ಬದುಕುಳಿಯುವ ಪ್ರಮಾಣ 24% ನಷ್ಟು ಹೆಚ್ಚಾಗಿದೆ ಅನ್ನೋದು ಸಮಾಧಾನಕರ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಚಿಕಿತ್ಸೆ ಭಾಗವಾಗಿ ಮಿಲ್ಟೆಫೋಸಿನ್ ಬಳಸುತ್ತಿರುವುದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ವೈರಸ್ ಅನ್ನು ಕೊಲ್ಲುವಂತೆ ಮಾಡದಿದ್ದರೂ 5-10 ದಿನಗಳಲ್ಲಿ ಸಂಭವಿಸುವ ಮರಣದಿಂದ ಪಾರು ಮಾಡುತ್ತದೆ. ಅದಕ್ಕಾಗಿ ಕೇರಳ ಆರೋಗ್ಯ ಇಲಾಖೆ ಆಂಫೊಟೆರಿಸಿನ್-ಬಿ ಚಿಕಿತ್ಸೆ ಜೊತೆಗೆ ಮಿಲ್ಟೆಫೋಸಿನ್ ಅನ್ನೂ ನೀಡಲಾಗುತ್ತಿದೆ. ಮೂಲತಃ ಕ್ಯಾನ್ಸರ್ಗಾಗಿ ಇದನ್ನ ಅಭಿವೃದ್ಧಿಪಡಿಸಲಾಗಿಗಿದೆ. ಆ ಬಳಿಕ ಲೀಶ್ಮೇನಿಯಾಸಿಸ್ಗೆ ಮರುಬಳಕೆ ಮಾಡಲಾಯಿತು. ಅಂದ್ರೆ ಪರಾವಲಂಬಿ ಜೀವಿಗಳಿಂದ ಉಂಟಾಗುವ ರೋಗವನ್ನು ತಡೆಯಲು ಮಿಲ್ಟೆಫೋಸಿನ್ ಚಿಕಿತ್ಸೆ ನೀಡಲಾಗುತ್ತದೆ. ಸಂಶೋಧನೆ ವರದಿಗಳನ್ನು ಪಡೆದ ಬಳಿಕ ಕೇರಳ ಈ ಚಿಕಿತ್ಸೆ ನೀಡುತ್ತಾ ಬರುತ್ತಿದೆ.
ಸದ್ಯ ಮರಣ ಪ್ರಮಾಣ ತಡೆಯಲು ಮುಂದಾಗಿರುವ ಕೇರಳ ಆರೋಗ್ಯ ಇಲಾಖೆಯು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್ಸಿಡಿಸಿ) ಸಹಯೋಗದೊಂದಿಗೆ ಪರಿಸರ ಮಾದರಿಗಳನ್ನು ಸಂಗ್ರಹಿಸಿ, ಸೋಂಕಿನ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.