ಸಮಾಧಿ ನೆಲಸಮಕ್ಕೆ ಅವನೇ ಕಾರಣ: ಗೀತಾ ಬಾಲಕೃಷ್ಣ

ರಾಜ್ಯ

ಬೆಂಗಳೂರು: ರಾಜ್ಯಾದ್ಯಂತ ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನಟ ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಇದೆ ಮೊದಲ ಬಾರಿಗೆ ದಿ.ನಟ ಬಾಲಕೃಷ್ಣ ಅವರ ಕುಟುಂಬದ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಬಾಲಕೃಷ್ಣ ಅವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿರುವ ವಿಚಾರಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿಮಾನಿಗಳು ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವಂತೆ ಈ ಕುರಿತು ನಟ ಬಾಲಕೃಷ್ಣ ಕುಟುಂಬದ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆ ಕುರಿತು ಖಾಸಗಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ನಟ ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಕೃಷ್ಣ ಅವರು, ನಾನು ಆ ಜಾಗಕ್ಕೆ ಸಂಬಂಧಿಸಿದಂತೆ 2004 ರಲ್ಲಿಯೇ ಕೇಸು ದಾಖಲಿಸಿದ್ದೆ. 2010ರಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ವಿವಾದ ಬಂತು. ವಿಷ್ಣು ಅವರ ಟ್ರಸ್ಟ್ ಗೆ 2 ಎಕರೆ ಕೊಡ್ತಿನಿ ಎಂದು ಆಗಲೇ ಹೇಳಿದ್ದೆ ಎಂದರು.

ಸಮಾಧಿ ನೆಲಸಮಕ್ಕೆ ಅವನೇ ಕಾರಣ

ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಬಾಲಣ್ಣ ಕುಟುಂಬದ ಆಂತರಿಕ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೀತಾ ಅವರು, ‘ನನಗೂ ಗೊತ್ತಿಲ್ಲದೆ ಹಲವು ವಿಚಾರಗಳು ಆ ಜಾಗದಲ್ಲಿ ನಡೆಯುತ್ತಿವೆ. ಹೈಕೋರ್ಟ್ ಆರ್ಡರ್ ಒಂದರ ಅನ್ವಯ ನೆಲಸಮ ಮಾಡಿದ್ದಾರೆ ಎಂದು ಗೊತ್ತಾಯ್ತು. ಆದರೆ ವಿಷ್ಣುವರ್ಧನ್ ಅವರ ಸಮಾಧಿ ಯಾರಿಗೂ ತಿಳಿಸದೆ ಈ ರೀತಿ ಮಾಡಬಾರದಿತ್ತು. ನನ್ನ ಇಬ್ಬರು ತಮ್ಮಂದಿರು ಈಗ ಇಲ್ಲ. ಕೊನೆಯ ತಮ್ಮ ಕಾರ್ತಿಕ್​ನಿಂದಲೇ ಇದೆಲ್ಲ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಸಿನೆಸ್ ಕಾರಣ

ನಮ್ಮ ತಂದೆ ತಾಯಿ ನಿಧನರಾದ ಬಳಿಕ ನಮ್ಮ ಒಡಹುಟ್ಟಿದ ಸಂಬಂಧ ಮುಗಿದಿತ್ತು, ಒಡನಾಟ ಇರಲಿಲ್ಲ, ಇದೆಲ್ಲ ನಡೆಯುತಿರೊದು ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಹಾಕಿದ್ದಾರೆ, ಕಾರ್ತೀಕ್ ಗೆ ರಾಜಕಾರಣಿಗಳ ಪರಿಚಯ ಚೆನ್ನಾಗಿದೆ. ನನಗೆ ಎಲ್ಲದರ ಮಾಹಿತಿ ಇದೆ. ಆದರೆ ನನ್ನ ಜೀವಕ್ಕೂ ಅಪಾಯ ಇದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡೋಕೆ ಹೀಗೆ ಮಾಡಿದ್ದಾರೆ. ನನ್ನ ಕುಟುಂಬದವರಿಗೂ ನನಗೂ ಸಂಪರ್ಕ ಇಲ್ಲ. ಈಗ ಏನೇ ಮಾಡಿದರೂ ಕಾನೂನು ಮುಖಾಂತರ ಮಾಡಬೇಕು. ಆ ಸ್ಥಳದಲ್ಲಿ ನಾಲ್ಕು ಜನಕ್ಕೆ ಹಕ್ಕಿದೆ. ಆದರೆ ಅಲ್ಲಿ ಮೋಸ ನಡೆದಿದೆ. ಸಾಕ್ಷಿ ಸಮೇತ ಕೋರ್ಟ್ ಗೆ ಕಳಿಸ್ತಿನಿ, ವಿಷ್ಣುವರ್ಧನ್ ನಮ್ಮ ತಂದೆಗೆ ಮಗನ ಥರ ಇದ್ದರು. ಅವರ ಸಮಾಧಿ ನೆಲಸಮ ಮಾಡಿರೋದು ಸರಿ ಅಲ್ಲ. ಕೋಟಿಗಟ್ಟಲೆ ಲಾಭ ಸಿಗ್ತಿದೆ ಅದಕ್ಕೆ ಮಾಲ್ ಕಟ್ಟೋದಕ್ಕೆ ಯೋಜನೆ ಮಾಡಿದ್ದಾರೆ ಎಂದು ಗೀತಾ ಹೇಳಿದ್ದಾರೆ.

Leave a Reply

Your email address will not be published. Required fields are marked *