ತಮಿಳುನಾಡು: ಮದುವೆಯಾದ ಕೇವಲ ಎರಡು ತಿಂಗಳ ನಂತರ ವರದಕ್ಷಿಣೆಗಾಗಿ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಯುವತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಿರುಪ್ಪೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ತಿರುಪ್ಪೂರಿನ ಜವಳಿ ವ್ಯಾಪಾರಿ ಅಣ್ಣಾದೊರೈ ಅವರ ಪುತ್ರಿ ರಿಧಾನ್ಯ (27) ಈ ವರ್ಷದ ಏಪ್ರಿಲ್‌ನಲ್ಲಿ ಕವಿನ್ ಕುಮಾರ್ (28) ಎಂಬ ಯುವಕನನ್ನು ವಿವಾಹವಾದರು.
ವರದಿಗಳ ಪ್ರಕಾರ, ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಇನ್ನು ಹೆಚ್ಚು ಬೇಡಿಕೆಗಳೊಂದಿಗೆ ಅತ್ತೆ-ಮಾವಂದಿರು ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಯುವತಿ ಮನನೊಂದಿದ್ದಳು.
ರವಿವಾರ, ರಿಧನ್ಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಕಾರಿನಲ್ಲಿ ಮನೆಯಿಂದ ಹೊರಟಿದ್ದಳು. ದಾರಿಯಲ್ಲಿ ಕಾರನ್ನು ನಿಲ್ಲಿಸಿ ಕೀಟನಾಶಕ ಕುಡಿದಿದ್ದಳು. ಸ್ಥಳೀಯರ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳಕ್ಕೆ ತಲುಪಿದಾಗ ಕಾರಿನಲ್ಲಿ ಆಕೆ ಪತ್ತೆಯಾಗಿದ್ದಳು. ಆದರೆ ಆದಾಗಲೇ ಮೃತಪಟ್ಟಿದ್ದಳು, ಬಾಯಿಂದ ರಕ್ತ ಬರುತ್ತಿತ್ತು.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರಿಧನ್ಯ ತನ್ನ ತಂದೆಗೆ ಏಳು ಆಡಿಯೋ ಸಂದೇಶಗಳನ್ನು ಕಳುಹಿಸಿದ್ದಾಳೆ. ಅವರು ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ನನ್ನ ಗಂಡ ನನ್ನನ್ನು ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ಈ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಕ್ಷಮಿಸಿ ಅಪ್ಪಾ, ಸಾಯುವ ಮುನ್ನ ತನ್ನ ತಂದೆಗೆ ಕಳುಹಿಸಿದ ಆಡಿಯೋ ಸಂದೇಶಗಳನ್ನು ಕೇಳಿದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ನೀನು ಮತ್ತು ಅಮ್ಮ ನನ್ನ ಪ್ರಪಂಚ. ನನ್ನ ಕೊನೆಯ ಉಸಿರಿನವರೆಗೂ ನೀನು ನನ್ನ ಭರವಸೆಯಾಗಿದ್ದೆ, ಆದರೆ ನಾನು ನಿನ್ನನ್ನು ತುಂಬಾ ನೋಯಿಸಿದೆ. ಆದರೂ ನೀನು ನನ್ನನ್ನು ಹೀಗೆ ನೋಡಲು ಸಾಧ್ಯವಾಗುತ್ತಿಲ್ಲ. ನಿನ್ನ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕ್ಷಮಿಸಿ ಅಪ್ಪಾ, ಎಲ್ಲವೂ ಮುಗಿದು ಹೋಗಿದೆ. ನಾನು ಹೊರಡುತ್ತಿದ್ದೆನೆ ಎಂದು ಅವಳು ಹೇಳಿದಳು.
ನನ್ನ ಜೀವನದುದ್ದಕ್ಕೂ ನಾನು ನಿಮಗೆ ಹೊರೆಯಾಗಿರಲು ಬಯಸುವುದಿಲ್ಲ. ಈ ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಈ ಜೀವನ ಇಷ್ಟವಿಲ್ಲ. ಅವರು ನನ್ನ ಮೇಲೆ ಮಾನಸಿಕವಾಗಿ ಹಲ್ಲೆ ಮಾಡುತ್ತಿದ್ದಾರೆ ಮತ್ತು ಅವನು ನನ್ನನ್ನು ದೈಹಿಕವಾಗಿ ಹಿಂಸಿಸುತ್ತಿದ್ದಾನೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಸಂಬಂಧಿಕರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ಮಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಕವಿನ್ ಕುಮಾರ್ ಮತ್ತು ಅವರ ಪೋಷಕರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.