ಚಿತ್ತಾಪುರ: ಮಾನವ ಮತ್ತು ಮಣ್ಣಿಗೆ ಅವಿನಾಭಾವ ಸಂಬಂಧವಿದೆ. ರೈತರು ಕೃಷಿ ಮಾಡಿ ಆಹಾರ ಬೆಳೆಯಲು ಮಣ್ಣು ಅವಶ್ಯಕವಾಗಿದೆ. ಎತ್ತುಗಳು ರೈತನ ಪ್ರಮುಖ ಸಾಧನಗಳಾಗಿವೆ. ಮಣ್ಣು ಮತ್ತು ಎತ್ತುಗಳಿಗೆ ಗೌರವ ಸಲ್ಲಿಸುವುದು ಮಣ್ಣೆತ್ತಿನ ಅಮವಾಸ್ಯೆ ಮುಂಗಾರಿನ ಹಬ್ಬವಾಗಿದೆ ಎಂದು ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ್ ಹೇಳಿದರು.
ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಬುಧವಾರ ಜರುಗಿದ ಶೆಳ್ಳಗಿ ಗ್ರಾಮದ ವೃತ್ತಿ ಕುಂಬಾರರಾದ ಬಸವರಾಜ ಕುಂಬಾರ ಅವರಿಗೆ ಸತ್ಕಾರ, ಮಣ್ಣೆತ್ತುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸತ್ಕರಿಸಿ ಮಾತನಾಡಿದ ಅವರು, ರೈತ ದೇಶದ ಆಧಾರ ಸ್ಥಂಭ, ಕೃಷಿ ಕಾರ್ಯದ ಪ್ರಮುಖವಾದ, ಬೆಳೆಯುವ ಪ್ರತಿ ಕಾಳಿನಲ್ಲಿ ತನ್ನದೆಯಾದ ಅದ್ವೀತಿಯ ಶ್ರಮವನ್ನು ಹೊಂದಿರುವ ಎತ್ತುಗಳನ್ನು ಪೂಜಿಸಲಾಗುತ್ತದೆ. ಕಾರ ಹುಣ್ಣಿಮೆಯ ನಂತರ ಬರುವ ಜಾನಪದ ಹಬ್ಬ ಇದಾಗಿದ್ದು, ರೈತರು ಸಂಭ್ರಮ ಪಡುತ್ತಾರೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ವೃತ್ತಿ ಕುಂಬಾರ ಬಸವರಾಜ ಕುಂಬಾರ, ನಮ್ಮ ವೃತ್ತಿಗೆ ಮಣ್ಣೆ ಆಧಾರ. ಮಣ್ಣಿನೊಂದಿಗೆ ಬೆರೆತು ಮಾಡುವ ಪವಿತ್ರ ಕಾಯಕ ಕುಂಬಾರಿಯಾಗಿದೆ. ಆಧುನಿಕತೆಯಿಂದಾಗಿ ನಮ್ಮ ವೃತ್ತಿಗೆ ತೊಂದರೆಯಾಗುತ್ತಿದೆ. ಇಂದಿಗೂ ಕೂಡಾ ಕುಂಬಾರಿಕೆ ವೃತ್ತಿಯನ್ನು ಮುಂದುವರೆಸಿರುವವರಿಗೆ ಆರ್ಥಿಕ ಭದ್ರತೆಯ ಯೋಜನೆಗಳನ್ನು ಸಮರ್ಪಕವಾಗಿ ದೊರೆಯಬೇಕಾಗಿದೆ ಎಂದು ಒತ್ತಾಸೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜಕುಮಾರ ಕುಂಬಾರ, ಮಲ್ಲಿನಾಥ ಅಶೋಕ ನಗರ, ಯಲ್ಲಪ್ಪ ಕುಂಬಾರ, ಅಭಿಶೇಕ್, ಕಾಶಿಬಾಯಿ, ಶರಣಮ್ಮ, ಪಾರ್ವತಿ, ಶರಣು, ಶೋಭಾ, ಪ್ರದೀಪ, ತುಳಜಪ್ಪ, ಲಕ್ಷ್ಮಿಬಾಯಿ ಸೇರಿದಂತೆ ಅನೇಕರು ಇದ್ದರು.