ವಾಡಿ: ಪಟ್ಟಣದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ, ಈ ಹಿನ್ನಲೆಯಲ್ಲಿ ನಡೆಯುವ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಕರೆ ನೀಡಿದ್ದಾರೆ.
ಹನ್ನೊಂದನೇ ವಿಶ್ವ ಯೋಗ ದಿನಾಚರಣೆಯು ಒಂದು ಭೂಮಿ- ಒಂದು ಆರೋಗ್ಯ ಎಂಬ ಘೋಷ ವಾಕ್ಯದಂತೆ ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಜೊತೆಗೆ ನೈಸರ್ಗಿಕ ಸಂಪತ್ತಿನ ಪ್ರಯೋಜನಯೊಂದಿಗೆ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಲು ಯೋಗ ದಿನಾಚರಣೆ ಸ್ಫೂರ್ತಿಯಾಗಲಿದೆ ಎಂದರು.
ಪತಂಜಲಿ ಯೋಗ ಸಮಿತಿ ಹಾಗೂ ಬೆಳಗಿನ ಬಳಗದ ವತಿಯಿಂದ ಬರುವ ಜೂನ್ 21 ರಂದು ಬೆಳಗ್ಗೆ 6 ಗಂಟೆಯಿಂದ 7 ರವರೆಗೆ ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸಕ್ತರೊಂದಿ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಗುವುದು ಎಂದರು.