ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವೀರ ಸಾವರ್ಕರ ಜಯಂತಿ ಪ್ರಯುಕ್ತ ಮುಖಂಡರು ಸಾವರ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಹೋರಾಟ ತ್ಯಾಗ ಹಾಗೂ ಅನುಭವಿಸಿದ ಕಷ್ಟಗಳ ಕುರಿತು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ವೀರ್ ಸಾವರ್ಕರ್ ಭಾರತೀಯರಲ್ಲಿ ಏಕತೆಯ ಕಟ್ಟಾ ಪ್ರತಿಪಾದಕರಾಗಿದ್ದರು ಮತ್ತು ಎಲ್ಲಾ ಸಮುದಾಯಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದಾದ ಅಖಂಡ ಭಾರತದಲ್ಲಿ ನಂಬಿಕೆ ಇಟ್ಟಿದ್ದರು. ಅವರ ದೃಷ್ಟಿಕೋನವು ಹಿಂದುತ್ವದ ಕಲ್ಪನೆ ಒಳಗೊಂಡಿತ್ತು, ಇದು ಧಾರ್ಮಿಕ ಪ್ರತ್ಯೇಕತೆಗಿಂತ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಒತ್ತು ನೀಡಿತು. ಈ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು. ಅಖಂಡ ಸ್ವತಂತ್ರ ಭಾರತಕ್ಕೆ ಅವರ ಕೊಡುಗೆಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ. ಆದರೆ ಈಗಿನ ಕೆಲವರಿಗೆ ಸಾವರ್ಕರ್ ಅವರ ದೇಶ ಭಕ್ತಿಯನ್ನು ಪ್ರಶ್ನಿಸುವುದು ಫ್ಯಾಷನ್ ಆಗಿದೆ ಇವರಿಗೆ ಕಾಲವೇ ತಕ್ಕ ಉತ್ತರ ನೀಡಲಿದೆ ಎಂದರು.
ವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸುತ್ತಿರುವಾಗ ಬ್ರಿಟೀಷರಿಂದ ಬಂಧಿತರಾಗಿ, ಭಾರತದ ಅಂಡಮಾನ್‍ನಲ್ಲಿನ ಜೈಲಿನಲ್ಲಿ ಭೀಕರವಾದ ಕರಿನೆರಳಿನ ಶಿಕ್ಷೆಗೆ ಗುರಿಯಾಗಿ ತಮ್ಮ ಜೀವಿತಾವಧಿಯ 11 ವರ್ಷಗಳನ್ನು ಕೈ-ಕಾಲುಗಳಿಗೆ ಕೋಳ ಹಾಕಿಸಿಕೊಂಡು, ಬೆಳಕು ಕಾಣದ ಜೈಲಿನ ನೆಲಮಾಳಿಗೆಯ ಚಿಕ್ಕ ಕೋಣೆಯಲ್ಲಿ ಕಳೆಯಬೇಕಾಯಿತು, ಜೈಲಿನ ಕೋಣೆಯ ಗೋಡೆಗಳ ಮೇಲೆ ಕ್ರಾಂತಿಕಾರಿ ಕವಿತೆಗಳನ್ನು ಬರೆದು ಅವೆಲ್ಲವನ್ನು ಬಾಯಿಪಾಠ ಮಾಡಿಸಿ ಜೈಲಿನಿಂದ ಬಿಡುಗಡೆಯಾದ ನಂತರ ಕೃತಿ ರಚಿಸಿದ್ದರು.
ಜೈಲಿನಿಂದ ಬಿಡುಗಡೆಯಾದ ಮೇಲೆಯೂ ಸುಮ್ಮನೆ ಕುಳಿತುಕೊಳ್ಳದೆ ದೇಶ ಒಡೆಯುವ ಮುಸ್ಲಿಂ ಲೀಗ್ ವಿರುದ್ಧ ಹೋರಾಡಲು ಹಿಂದೂ ಮಹಾಸಭಾ ಸ್ಥಾಪಿಸಿದರಲ್ಲದೆ, ಪತಿತ ಪಾವನ ಮಂದಿರ ಸ್ಥಾಪಿಸಿ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು, ಸಹಪಂಕ್ತಿ ಭೋಜನಗಳನ್ನು ಆಯೋಜಿಸಿ ಅಸಮಾನತೆ ತೊಡೆಯಲು ಸಹ ಶ್ರಮಿಸಿದರು, ಅವರ ದೇಶಪ್ರೇಮ, ವ್ಯಕ್ತಿತ್ವ ಬಲಿದಾನದ ಬದುಕು ಈ ಭೂಮಿ ಇರುವವರಿಗೆ ಶಾಶ್ವತವಾಗಿದ್ದು ನಮ್ಮೆಲ್ಲರಲ್ಲಿನ ದೇಶಭಕ್ತಿಗೆ ಪ್ರೇರಣೆಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಅರ್ಜುನ ಕಾಳೆಕರ, ಗುಂಡುಗೌಡ ಚಾಮನೂರ, ಸಂತೋಷ ಹಿರೇಮಠ, ನಾಗರಾಜ ಪುಜಾರಿ,ಪಾಂಡು ಚವ್ಹಾಣ ಸೇರಿದಂತೆ ಅನೇಕರು ಇದ್ದರು.