ಹುಮನಾಬಾದ್: ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆಯ ವೀರಶೈವ ಲಿಂಗಾಯತ ಜನಸಂಖ್ಯೆ ಕುರಿತು ಪ್ರಸ್ತಾಪಕ್ಕೆ ಬಂದರೆ ಎಲ್ಲಾ ಪಕ್ಷದ ವೀರಶೈವ ಲಿಂಗಾಯತ ಶಾಸಕರು ವಿರೋಧ ವ್ಯಕ್ತಪಡಿಸಬೇಕು, ಅನ್ಯಾಯದ ವಿರುದ್ಧ ಸಿಡಿದೆಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, 10 ವರ್ಷದ ಹಿಂದಿನ ವರದಿ ಇದೀಗ ಏಕೆ ಪ್ರಸ್ತಾಪಕ್ಕೆ ಬರುತ್ತಿದೆ ? ಈ ಹಿಂದೆ ಹಾವನೂರು ಆಯೋಗದ ವರದಿ ಹರಿಯುವ ಮೂಲಕ ಭೀಮಣ್ಣ ಖಂಡ್ರೆ ವಿರೋಧ ವ್ಯಕ್ತಪಡಿಸಿದ್ದರು. ತಂದೆಯಂತೆ ಸಚಿವ ಈಶ್ವರ ಖಂಡ್ರೆ ಕೂಡ ದಿಟ್ಟ ಹೆಜ್ಜೆ ಇಡಬೇಕು ಎಂದರು.
ಕಾರ್ಯಕ್ರಮದ ನಂತರ ಸಚಿವ ಈಶ್ವರ ಖಂಡ್ರೆ ಹಾಗೂ ಶ್ರೀಗಳು ಕೆಲ ಹೊತ್ತು ಜಾತಿಗಣತಿ ವಿಷಯದ ಕುರಿತು ಚರ್ಚಿಸಿದರು. ವೀರಶೈವ ಲಿಂಗಾಯತ ಎಂದು ಬರೆಸುವ ಬದಲಿಗೆ ಕೆಲ ಒಳಪಂಗಡಗಳು ಮೀಸಲಾತಿಗಾಗಿ ಬೇರೆ ಬೇರೆ ಬರೆಸಿರುವ ಕುರಿತು ವಿವರಿಸಿದರು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಸಚಿವ ಖಂಡ್ರೆ ಭರವಸೆ ನೀಡಿದರು.