ವಿಜಯಪುರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಾಮಾನ್ಯರಂತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನಿಂದ ಸಾರಿಗೆ ಬಸ್‌ನಲ್ಲಿ ವಿಜಯಪುರಕ್ಕೆ ಅವರು ತೆರಳಿದ್ದು, ಸಚಿವರ ಸರಳತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಇತರ ಸಂಘಟನೆಗಳಿಂದ ಆಯೋಜಿಸಿರುವ ಅಂಬೇಡ್ಕರ್ ಹಬ್ಬದಲ್ಲಿ ಭಾಗಿಯಾಗಲು, ಕೆಕೆಆರ್‌ಟಿಸಿ ಕಲ್ಯಾಣ ರಥ ಬಸ್‌ನಲ್ಲಿ ವಿಜಯಪುರಕ್ಕೆ ತೆರಳಿದ ಸಚಿವ ಕೃಷ್ಣಬೈರೇಗೌಡರನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು ಹಾಗೂ ಅಧಿಕಾರಿಗಳು ಸ್ವಾಗತಿಸಿದ್ದಾರೆ.

ಕಲ್ಯಾಣ ರಥ ಬಸ್‌ನಿಂದ ಇಳಿದ ಬಳಿಕ ಸಚಿವರಿಗೆ ಪುಸ್ತಕ ನೀಡಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು. ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಸಾಥ್ ನೀಡಿದ್ದಾರೆ. ಸಚಿವರ ಸರಳತೆ ಕುರಿತ ವಿಡಿಯೊ ವೈರಲ್ ಆಗಿದ್ದು, ಸಚಿವರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೊಮ್ಮೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಯಾಣಿಸಿ ಗಮನ ಸೆಳೆದಿದ್ದರು. ನೇರಳೆ ಮಾರ್ಗದ ಕೆಂಗೇರಿಯಿಂದ ವಿಧಾನಸೌಧವರೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಯಾಣಿಸಿದ್ದರು. ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ನಾನು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದೆನೆ ಎಂದು ತಿಳಿಸಿದ್ದರು.