ಕಲಬುರಗಿ: ಜಾನಪದ ದೇಶದ ಮೂಲ ಸಂಸ್ಕೃತಿಯಾಗಿದೆ. ಇದಕ್ಕೆ ಗ್ರಾಮೀಣ ಜನರ ಕೊಡುಗೆ ಅಪಾರವಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ. ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಬಿ ನಿಂಗಪ್ಪ ಹೇಳಿದರು.
ತಾಲೂಕಿನ ಗೌಡನಹಳ್ಳಿಯ ಭೋಜಲಿಂಗೇಶ್ವರ ಮಠದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ಸೇಡಂ ತಾಲೂಕ ಘಟಕ ಹಾಗೂ ಭೋಜಲಿಂಗೇಶ್ವರ ಮಠದ ಸಂಯುಕ್ತಾಶ್ರಯದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ಜಾನಪದ ಜಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜನಪದರ ಹಾಡು-ಪಾಡು’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಡಾ.ಜಗನ್ನಾಥ ಎಲ್ ತರನಳ್ಳಿ, ಹಾಡು, ನೃತ್ಯ, ಸಂಗೀತ, ಸಾಹಿತ್ಯ, ಮೌಲ್ಯಗಳು ಒಳಗೊಂಡ ಜಾನಪದ ದೇಶದ ಜೀವಾಳವಾಗಿದೆ. ಟಿವಿ, ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿನ ಕಾಲದಲ್ಲಿಯೇ ಇದು ಜನರಿಗೆ ಮನರಂಜನೆ ನೀಡಿದೆ. ಜಾನಪದದಲ್ಲಿನ ಅನೇಕ ನೀತಿ ಕಥೆಗಳು ಹಿರಿಯರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು.
ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪುರ ಮಾತನಾಡಿ, ಜಾಗತೀಕರಣದ ಸವಾಲುಗಳಿಗೆ ಜಾನಪದ ಮಾತ್ರ ಸವಾಲೊಡ್ಡಬಲ್ಲದು ಎಂದರು.
ಸಂಶೋಧಕ-ಸಾಹಿತಿ ಮಡುಬಿ ಗುಂಡೇರಾವ ಮಾತನಾಡಿ, ಜನಪದ ಉಳಿಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು. ಮತ್ತೆ ಪುನಃ ಜಾನಪದ ಸಂಸ್ಕೃತಿಗೆ ಮೊರೆಹೋಗುವುದು ಇಂದಿನ ಅಗತ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಪ್ರಕಾಶ ತಾತಾ ವಹಿಸಿದ್ದರು. ಸಮಾಜ ಸೇವಕ ಶಿವಯೋಗೆಪ್ಪಾ ಎಸ್ ಬಿರಾದಾರ, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ್, ಸೇಡಂ ತಾಲೂಕು ಕಜಾಪ ಅಧ್ಯಕ್ಷ ಶಿವರಾವ ಭೋವಿ, ಕಾರ್ಯದರ್ಶಿ ಶಿವರೆಡ್ಡಿ ಗೌಡನಳ್ಳಿ, ಪ್ರಮುಖರಾದ ಡಾ.ಸಾಬಣ್ಣ ಭೋವಿ, ರಾಘವೇಂದ್ರ ರೆಡ್ಡಿ, ಬಾಬು ಶೆಟ್ಟಿ, ಶರಣು ಮಡಿವಾಳ, ಅಶೋಕ ದೊಡ್ಡಮನಿ, ಅವಿನಾಶ ಭೋವಿ, ಉಮೇಶ ದೊಡ್ಡಮನಿ, ಶರಣಪ್ಪ ಕೋಡ್ಲಾ ಹಾಗೂ ಗ್ರಾಮಸ್ಥರು, ಭಕ್ತಾದಿಗಳು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಕ್ಕಳಿಂದ ಆಕರ್ಷಕ ಜಾನಪದ ನೃತ್ಯ ಜರುಗಿತು. ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.