ಶಿರಸಿ ಯುವಕರಿಂದ ಹೊಸ ತಂತ್ರಜ್ಞಾನ ಆವಿಷ್ಕಾರ: ಕಾಡಿನಲ್ಲೂ ಸಿಗಲಿದೆ 4G ನೆಟ್ವರ್ಕ್
ಸುದ್ದಿ ಸಂಗ್ರಹ ಕಾರವಾರ
ಪಶ್ಚಿಮ ಘಟ್ಟ ಭಾಗವನ್ನೇ ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ಗಳ ಸಮಸ್ಯೆ ಕೇಳತೀರದು. ನಗರಪ್ರದೇಶದಲ್ಲಿ ಇದ್ದರೂ ನೆಟ್ವರ್ಕ್ ಸಿಗದೇ ಹಿಡಿಶಾಪ ಹಾಕುವ ಸ್ಥಿತಿ. ಇನ್ನು ರೇಷನ್ ಕಾರ್ಡ್ ಇ-ಕೆವೈಸಿ ಸೇರಿದಂತೆ ಹಲವು ಆನ್ಲೈನ್ ಸೇವೆಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಇದನ್ನ ಮನಗಂಡ ಶಿರಸಿಯ ಮೂವರು ಯುವಕರ ತಂಡ ಹೊಸ ತಂತ್ರಜ್ಞಾನವನ್ನು ಅಭಿವೃದ್ದಿಗೊಳಿಸಿದ್ದು, ಕಾಡುಪ್ರದೇಶದಲ್ಲಿ ಇದ್ದರೂ ನೆಟ್ವರ್ಕ್ ಹಾಗೂ ಇಂಟರ್ನೆಟ್ ಬಳಸಲು ಸುಲಭ ಮಾಡಿದೆ. ಪ್ರಾಯೋಗಿಕ ಪ್ರಯತ್ನ ಸಫಲವಾಗಿದೆ.
ನೆಟ್ವರ್ಕ್ ಪರದಾಟಕ್ಕೆ ಸಿಗಲಿದೆ ಮುಕ್ತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ಗಾಗಿ ಮರವನ್ನೇರಿ ಪರದಾಡಿದ್ರೆ, ಗುಡ್ಡಬೆಟ್ಟವನ್ನು ಸಹ ಹತ್ತಿ ಕುಳಿತ ಅದೆಷ್ಟೋ ಉದಾಹರಣೆಗಳಿವೆ. ಇ-ಕೆವೈಸಿ ಹಾಗೂ ಇನ್ನಿತರ ಆನ್ಲೈನ್ ಸೇವೆಗಾಗಿ ಜನ ದಿನಗಟ್ಟಲೇ ನಿಂತು ಸಂಕಷ್ಟ ಅನುಭವಿಸಿದ, ವರ್ಕ್ಫ್ರಮ್ ಹೋಮ್ ಪಡೆದುಕೊಂಡ ಉದ್ಯೋಗಿಗಳು ಗುಡ್ಡದಲ್ಲೇ ಠಿಕಾಣಿ ಹೂಡಿ ಪರದಾಡಿದ್ದಾರೆ.
ಪಶ್ಚಿಮ ಘಟ್ಟವನ್ನು ಹೊಂದಿದ ಈ ಜಿಲ್ಲೆಯಲ್ಲಿ ಬಿಎಸ್ಎನ್ಎಲ್, ಏರ್ಟೆಲ್, ಐಡಿಯಾ, ರಿಲಿಯನ್ಸ್ ಹೀಗೆ ಯಾವುದೇ ಮೊಬೈಲ್ ಕಂಪನಿಯ ಸಿಮ್ ತೆಗೆದುಕೊಳ್ಳಲಿ ನಗರ ಪ್ರದೇಶದಿಂದ ಹಿಡಿದು ಹಳ್ಳಿಗಳವರೆಗೆ ನೆಟ್ವರ್ಕ್ ಸಮಸ್ಯೆಯೇ ಹೆಚ್ಚು. ಹಲವು ಹಳ್ಳಿಯಲ್ಲಿ ಮೊಬೈಲ್ ಟವರ್ ಇದ್ರೂ ಸಿಗ್ನಲ್ ಸಿಗೋಲ್ಲ. ಕಾರವಾರ ನಗರದಲ್ಲೇ ಕೆಲವು ಬಡಾವಣೆಗಳಲ್ಲಿ ನೆಟ್ವರ್ಕ್ ಈಗಲೂ ಇಲ್ಲ.
ಆದರೆ ಇದೀಗ ಕುಗ್ರಾಮದಲ್ಲಿ ಇರಲಿ, ಮನೆಯ ಒಳಗೆ ನೆಟ್ವರ್ಕ್ ಬಾರದಿರಲಿ, ಕುಳಿತಲ್ಲೇ ನೆಟ್ವರ್ಕ್ ಸಮಸ್ಯೆ ಇದ್ದರೂ 4G ನೆಟ್ವರ್ಕ್ ಬಳಸಿ ಕರೆ ಹಾಗೂ ಇಂಟರ್ನೆಟ್ ಸುಲಭವಾಗಿ ಬಳಸಬಹುದು. ಶಿರಸಿಯ ಅಭಯ್, ಸುದರ್ಶನ್, ಸಮರ್ಥ ಎಂಬ ಮೂರು ಜನ ಯುವಕರು ಟೆಲಿಕಾಮ್ ಟೆಕ್ನಲಾಜಿ ಓದಿ ಉತ್ತಮ ಸಂಬಳಕ್ಕೆ ಉದ್ಯೋಗದಲ್ಲಿ ಇದ್ದರು. ಕೋವಿಡ್ ಸಮಯದಲ್ಲಿ ಊರಿಗೆ ಬಂದಾಗ ತಮ್ಮೂರಿನ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ನೀಡುವ ಸಂಕಲ್ಪ ಮಾಡಿದರು. ಈಗಿರುವ ಟೆಕ್ನಾಲಜಿಯನ್ನ ಅಭಿವೃದ್ಧಿಪಡಿಸಿ ಹಳ್ಳಿಗಳಲ್ಲಿ 4G ನೆಟ್ವರ್ಕ್ ಕೊಡುವ ಕನಸು ಹೊತ್ತು ಕಳೆದ ಒಂದೂವರೆ ವರ್ಷದಿಂದ ಉದ್ಯೋಗ ಬಿಟ್ಟು ಇದರ ಬಗ್ಗೆ ಅಧ್ಯಯನ ನಡೆಸಿ ಕೊನೆಗೂ ಈ ಸಮಸ್ಯೆಗೆ ಪರಿಹಾರ ಹುಡುಕಿದರು. ತಾವು ಅಭಿವೃದ್ಧಿಪಡಿಸಿದ ಮೈಕ್ರೋ ಸೆಲ್ ಹಾಗೂ ಫೆಮ್ಟೋಸೆಲ್ ಅನ್ನು ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯಕ್ಕೆ ತಿಳಿಸಿದರು. ಖುದ್ದು ಕೇಂದ್ರ ಸಚಿವರು ಇವರ ಸಾಧನೆಗೆ ಬಿಎಸ್ಎನ್ಎಲ್ ಸಹಯೋಗದಲ್ಲಿ ಉತ್ತರಪ್ರದೇಶದ ಆಗ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ ಇದೀಗ ಯಲ್ಲಾಪುರ ಭಾಗದ ಆನಗೋಡದಲ್ಲಿ ಪರೀಕ್ಷೆ ಯಶಸ್ವಿ ಕಂಡಿದೆ. ಆಗ್ರಾದ ಜನನಿಬಿಡ ಪ್ರದೇಶದಲ್ಲಿ ಸಹ ಫೆಮ್ಟೋಸೆಲ್ ಪರೀಕ್ಷೆ ನಡೆಸಲಾಗುತ್ತಿದ್ದು, ಇದೀಗ ಪ್ರಾಯೋಗಿಕ ಪರೀಕ್ಷೆ ಮುಕ್ತಾಯದ ಘಟ್ಟ ತಲುಪಿದೆ. ಶೀಘ್ರ ಅತೀ ಕಡಿಮೆ ಬೆಲೆಯಲ್ಲಿ ಜನರ ಕೈಗೂ ಸಿಗುವ ಭರವಸೆ ವ್ಯಕ್ತಪಡಿಸುತ್ತಾರೆ ಈ ಉತ್ಸಾಹಿ ಯುವಕರು.
ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಮಸ್ಯೆಯನ್ನೇ ಕೇಂದ್ರವಾಗಿರಿಸಿಕೊಂಡು ಈ ಮೂರು ಜನ ಯುವಕರು ನೆಕ್ಸಸ್ಸ್ಫೆರಿಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (NexusSpherical Technologies Pvt. Ltd.) ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ. ಇವರಿಗೆ ಸಹಕಾರವಾಗಿ ಹಾರ್ಡವೇರ್ ಅನ್ನು ಬೆಂಗಳೂರು ಮೂಲದ ಲೆಖಾ ವೈರ್ಲೆಸ್ ಸೊಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ ನೀಡುತ್ತಿದೆ. ಈ ಸಂಸ್ಥೆ ಮೂಲಕ ಈಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ 4G ನೆಟ್ವರ್ಕ್ ಹಾಗೂ ಇಂಟರ್ನೆಟ್ಗಾಗಿ ಮೈಕ್ರೋ ಸೆಲ್ ಮತ್ತು ಫೆಮ್ಟೋಸೆಲ್ (FEMTO Cell) ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ನೆಟ್ವರ್ಕ್ ಇರದ ಪ್ರದೇಶದಲ್ಲಿ ಟವರ್ ಹಾಕದೇ ಮೈಕ್ರೋ ಸೆಲ್ ಅನ್ನು ಅಳವಡಿಸಿ ನೆಟ್ವರ್ಕ್ ಹಾಗೂ ಇಂಟರ್ನೆಟ್ ಬಳಸಬಹುದು. ಹಾಗೆಯೇ ಫೆಮ್ಟೋಸೆಲ್ನಲ್ಲಿ ಟವರ್ ಇದ್ದರೂ ನೆಟ್ವರ್ಕ್ ಬರದ ಮನೆಗಳಿಗೆ ಅಳವಡಿಸಿ ನೆಟ್ವರ್ಕ್ ಪಡೆಯಬಹುದು. ಇದರಿಂದ ಗ್ರಾಮೀಣ ಭಾಗದ ಸಹಕಾರ ಸಂಘಗಳು, ನ್ಯಾಯಬೆಲೆ ಅಂಗಡಿಗಳು, ಎಟಿಎಂಗಳು ಹಾಗೂ ಆನ್ಲೈನ್ ಶಿಕ್ಷಣಕ್ಕೂ ಉಪಯೋಗ ಆಗಲಿದೆ. ಇದನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ನೀಡುವ ಗುರಿಯನ್ನು ಹೊಂದಿದ್ದು, ಸದ್ಯ ಈ ವ್ಯವಸ್ಥೆ ಕೇವಲ BSNLನಲ್ಲಿ ಮಾತ್ರ ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಎಲ್ಲಾ ನೆಟ್ವರ್ಕ್ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ನೀಡುವ ಗುರಿ ಹೊಂದಲಾಗಿದೆ. ಸದ್ಯ ಇದೀಗ ಯಲ್ಲಾಪುರ ಭಾಗದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಮೊಬೈಲ್ ಸಿಗ್ನಲ್ ಬಾರದ, ಇಂಟರ್ನೆಟ್ ಇಲ್ಲದ ಪ್ರದೇಶದಲ್ಲಿ ಇದನ್ನು ಬಳಸಿ ಜನ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಯುವಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.