ಸುದ್ದಿ ಸಂಗ್ರಹ ಕಲಬುರಗಿ
ನರೇಂದ್ರ ಮೋದಿ ಅವರೇ ದೊಡ್ಡ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಧಾನಿ ಅವರಿಗೆ ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ಗೃಹ ಮತ್ತು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದ್ಯಮಿ, ಬಿಜೆಪಿ ಮುಖಂಡ ಸುಭಾಷಚಂದ್ರ ಅವರ 22 ಸಾವಿರ ಕೋಟಿ ಸಾಲವನ್ನು ಕೇವಲ 6 ಕೋಟಿಗೆ ಇತ್ಯರ್ಥ ಮಾಡಲು ಮೋದಿ ಸರ್ಕಾರದಲ್ಲಿ ಮಾತ್ರ ಸಾಧ್ಯ’ ಎಂದು ವ್ಯಂಗ್ಯವಾಡಿದರು.
ಕೇಂದ್ರದ ಎನ್ ಡಿಆರ್ ಎಫ್ ಕಠಿಣ ನಿಯಮಾವಳಿಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಬರಪೀಡಿತ ತಾಲೂಕಿನ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಿ ರೈತರಿಗೆ ನೆರವಾಗಿ ಎಂದು ಮೋದಿ ಅವರಿಗೆ ಕೇಳಲು ಆಗುತ್ತಿಲ್ಲ. ಹೀಗಾಗಿ ನಾವು ಸರ್ವಪಕ್ಷ ನಿಯೋಗಕ್ಕೆ ದಿನಾಂಕ ನಿಗದಿ ಮಾಡಿದರೂ ಅವರು ಬರುವ ಸಾಧ್ಯತೆ ಇಲ್ಲ ಎಂದರು.
ಕೆಪಿಎಸ್ಸಿಯಲ್ಲಿನ ಅಕ್ರಮಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ಹಾಗೂ ಸಿಐಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದರೂ ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್, ಮಧ್ಯವರ್ತಿ ಬಸವರಾಜ ಕನ್ನಾಳೆಯನ್ನು ಬಂಧಿಸಿ ಕರೆತಂದಿದ್ದು ಕರ್ನಾಟಕದ ಸಿಐಡಿ ಪೊಲೀಸರೇ. ಆ ಹೆಮ್ಮೆ ನನಗಿದೆ. ನಾನು ಗೃಹಸಚಿವನಾಗಿ ಇರುವವರೆಗೂ ಇದರಲ್ಲಿ ಯಾರೂ ತಪ್ಪಿಸಿಕೊಳ್ಳುವ ಮಾತೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿತೇಂದ್ರ ಸಮಿತಿ ವರದಿ ಪರಿಶೀಲನೆ: ರಾಜ್ಯದಲ್ಲಿನ ಜೈಲುಗಳ ಸುಧಾರಣೆ ಕುರಿತು ಹಿತೇಂದ್ರ ಅವರ ವರದಿ ಪರಿಶೀಲಿಸಲಾಗುತ್ತಿದೆ. ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದಂತೆ ರಾಜ್ಯದ ಬಹುತೇಕ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳಿದ್ದಾರೆ. ಹೊಸದಾಗಿ ಜೈಲುಗಳನ್ನು ನಿರ್ಮಿಸಲಾಗುತ್ತಿದ್ದು, ಹಲವು ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಕೈದಿಗಳಿಗೆ ಜೈಲಿನಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು. ಕೈದಿಗಳ ಮಾನಸಿಕ ಸ್ಥಿತಿಗತಿ ಅರಿತುಕೊಂಡು ಅಗತ್ಯ ಚಿಕಿತ್ಸೆ, ಆಪ್ತಸಮಾಲೋಚನೆ ನಡೆಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಪದೆ ಪದೆ ಪೊಲೀಸ್ ಸಿಬ್ಬಂದಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಯಲ್ಲಿ ಸಿಲುಕಿಕೊಂಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೊಲೀಸರಿಗೆ ಅತಿ ಹೆಚ್ಚು ಸಂಬಳ ಕೊಡುವ ರಾಜ್ಯಗಳ ಪೈಕಿ ಕರ್ನಾಟಕವೂ ಮುಂಚೂಣಿಯಲ್ಲಿದೆ. ಆದರೂ ಕೆಲವರು ಹಣಕ್ಕೆ ಕೈಚಾಚುತ್ತಿದ್ದಾರೆ. ಇದು ದುರದೃಷ್ಟಕರ. ಐಎಎಸ್ ಅಧಿಕಾರಿಯೇ ಕೆಪಿಎಸ್ಸಿ ಅಕ್ರಮದಲ್ಲಿ ಸಿಲುಕಿಕೊಂಡಿದ್ದಾರೆ. ಹಿಂದೆ ಐಪಿಎಸ್ ಅಧಿಕಾರಿ ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾಗಿದ್ದರು. ಇವರಿಗೇನು ಕಡಿಮೆ ಸಂಬಳ ಇರುತ್ತದೆಯೇ ? ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಇದ್ದರು.