ಸುದ್ದಿ ಸಂಗ್ರಹ ಶಹಾಬಾದ್
ವಿಶ್ವ ಭ್ರಾತೃತ್ವದ ಮೂಲಕ ಸಮಾಜದಲ್ಲಿ ಎಲ್ಲರನ್ನು ಅಣ್ಣ ತಮ್ಮಂದಿರಂತೆ ನೋಡಿದಾಗ ಮಾತ್ರ ಶಾಂತಿ ಸಿಗಲು ಸಾಧ್ಯ ಎಂದು ಬ್ರಹ್ಮಕುಮಾರಿ ಜಗದೇವಿ ಅಕ್ಕ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಾ ಬಂಧನ ಎಂಬುದು ಭ್ರಾತೃತ್ವದ ಸಂಕೇತ, ಸಹೋದರಿ ತನ್ನ ಸಹೋದನಿಗೆ ಕಟ್ಟುವ ರಾಖಿಯು ಕೇವಲ ದಾರವಾಗಿರದೆ, ಇಬ್ಬರ ನಡುವಿನ ಶುದ್ಧವಾದ, ಪವಿತ್ರವಾದ ಮತ್ತು ನಿರಂತರ ಪ್ರೀತಿಯ ಗುರುತಾಗಿದೆ. ಹಣ ಆಸ್ತಿ ಎಷ್ಟಿದ್ದರೇನು. ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಶಾಂತಿ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃ ಶಾಂತಿ ತುಂಬುತ್ತಿವೆ. ದೇವನೊಬ್ಬ ನಾಮ ಹಲವು ಎಂಬ ತತ್ವದಡಿ ಮುನ್ನಡೆಯುತ್ತಿದೆ ಎಂದರು.
ನಿವೃತ್ತ ಪ್ರಾಚಾರ್ಯ ನಾಗೇಂದ್ರ ಬೆಲೂರ ಮಾತನಾಡಿ, ಮನುಷ್ಯನಲ್ಲಿ ಶಾಂತಿ- ಸಹನೆ ತುಂಬುವ ಮೂಲಕ ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತಿರುವ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯಗಳು, ಮಾನವನನ್ನು ದೇವ ಮಾನವನಾಗಿ ರೂಪಿಸುತ್ತಿವೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಸಮಾಜದಲ್ಲಿ ಯಾವುದೆ
ಫಲಾಕ್ಷೇಪವಿಲ್ಲದೆ ನಿಸ್ವಾರ್ಥವಾಗಿ ಜನರಿಗೆ ಸಂತೋಷದ, ನೆಮ್ಮದಿಯಿಂದ ಬಾಳಲು ದಾರಿ ತೋರಿಸುವ ದಾರಿದೀಪವಾಗಿದೆ ಎಂದರು.
ನಗರ ಪೊಲೀಸ್ ಠಾಣೆಯ ಪಿಐ ಪರಶುರಾಮ ವನಂಜಕರ್, ತಾ.ಪಂ ಇಓ ಮಲ್ಲಿನಾಥ ರಾವೂರ, ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ಮಾತನಾಡಿದರು.
ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಜಯಶ್ರೀ ಸ್ವಾಗತಿಸಿದರು, ಬ್ರಹ್ಮಕುಮಾರಿ ಮಧು ಅಕ್ಕಾ ನಿರೂಪಿಸಿದರು, ಬಿ.ಕೆ ದಶರಥ ವಂದಿಸಿದರು.
ಚಿಣ್ಣರಿಂದ ನೃತ್ಯ ಪ್ರದರ್ಶನ ನಡೆಯಿತು. ನಂತರ ಸಾಮೂಹಿಕವಾಗಿ ಸರ್ವರನ್ನು ರಾಖಿ ಕಟ್ಟಿ ಪ್ರಸಾದ ವಿತರಣೆ ಮಾಡಲಾಯಿತು.