ಸುದ್ದಿ ಸಂಗ್ರಹ ಕಲಬುರಗಿ
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ, ಜೇವರ್ಗಿಯಿಂದ ಮೂರನೇ ಬಾರಿ ಶಾಸಕರಾಗಿರುವ ಡಾ.ಅಜಯ್ ಸಿಂಗ್ ಅವರಿಗೆ ಕೊನೆಗೂ ಸಚಿವ ಸ್ಥಾನ ಒಲಿದಿದೆ. ಈ ಮೂಲಕ ಪಕ್ಷ ನಿಷ್ಠೆಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ.
ಸದ್ಯ ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಡಾ.ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವಂತೆ ತೀವ್ರ ಒತ್ತಡ ಹೆಚ್ಚಿತ್ತು.
ಮೂರು ಬಾರಿ ಚಿತ್ತಾಪುರ ಕ್ಷೇತ್ರದಿಂದ ಶಾಸಕರಾಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಬಾರಿಯೂ ಸಚಿವ ಸ್ಥಾನ ಸಿಕ್ಕಿತ್ತು. ಅಜಯ್ ಸಿಂಗ್ ಪ್ರತಿ ಬಾರಿ ಸಚಿವ ಸ್ಥಾನಕ್ಕೆ ಬೇಡಿಕೆ ಮಂಡಿಸಿದ್ದರೂ ವರಿಷ್ಠರು ಸಚಿವ ಸ್ಥಾನ ನೀಡಿರಲಿಲ್ಲ. ಹೀಗಾಗಿ, ಅವರ ಬೆಂಬಲಿಗರಲ್ಲಿ ಸಹಜವಾಗಿಯೇ ಬೇಸರ ಮೂಡಿತ್ತು. ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನದ ಜೊತೆಗೆ ಸಂಪುಟ ಸ್ಥಾನ ಮಾನ ನೀಡಿ ಬೇಸರ ಶಮನ ಮಾಡಲಾಗಿತ್ತು.
ಇತ್ತೀಚೆಗೆ ನಡೆದ ಕೇರಳ, ತಮಿಳುನಾಡು ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದ ಡಾ. ಅಜಯ್ ಸಿಂಗ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಹತ್ತಿರವಾಗಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಳಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.
1974ರ ಜನವರಿ 29ರಂದು ಧರ್ಮಸಿಂಗ್ ಹಾಗೂ ಪ್ರಭಾವತಿ ದಂಪತಿಯ ದ್ವಿತೀಯ ಪುತ್ರರಾಗಿರುವ ಡಾ.ಅಜಯ್ ಸಿಂಗ್, ಬೆಂಗಳೂರಿನ ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದಾರೆ.
1999ರಿಂದ 2009ರ ಅವಧಿಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಜಯ್ ಸಿಂಗ್, 2010ರಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಬಳಿಕ 2013ರ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿ ಮತಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. 2018ರ ಚುನಾವಣೆ ಮತ್ತು 2023ರ ಚುನಾವಣೆಗಳಲ್ಲೂ ಮರು ಆಯ್ಕೆ ಆಗಿದ್ದಾರೆ.
2020ರಿಂದ 2022ರ ಅವಧಿಯಲ್ಲಿ ಡಾ.ಅಜಯ್ ಸಿಂಗ್ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು. 2023ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಡಾ.ಅಜಯ್ ಸಿಂಗ್ ಅವರು ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು.
ಬಿ.ಆರ್ ಪಾಟೀಲ, ಕನೀಜ್ ಫಾತಿಮಾಗೆ ನಿರಾಸೆ
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪಕ್ಷದ ಹಿರಿಯ ನಾಯಕ, ಆಳಂದ ಶಾಸಕ ಬಿ.ಆರ್ ಪಾಟೀಲ ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರಿಗೆ ನಿರಾಸೆಯಾಗಿದೆ.
ಇದು ತಮ್ಮ ಕೊನೆಯ ಚುನಾವಣೆ ಎಂದೆ ಹೇಳಿಕೊಳ್ಳುತ್ತಾ ಬಂದಿದ್ದ ಬಿ.ಆರ್ ಪಾಟೀಲ ಅವರಿಗೆ ಹಿರಿತನ ಆಧರಿಸಿ ಸಚಿವ ಸ್ಥಾನ ನೀಡಲಾಗುತ್ತಿದೆ ಎಂಬ ನಿರೀಕ್ಷೆ ಇತ್ತು. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಟೀಲರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಜಿಲ್ಲೆಯಲ್ಲಿ ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಸೇರಿದ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಬಿ.ಆರ್ ಪಾಟೀಲ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎನ್ನಲಾಗುತ್ತಿದೆ.
ವಿಧಾನಸಭೆ ಸ್ಪೀಕರ್ ಸ್ಥಾನ ತಮಗೆ ಸಿಗಬಹುದು ಎಂದು ಬಿ.ಆರ್ ಪಾಟೀಲ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಆ ಸ್ಥಾನವನ್ನು ರೋಣ ಶಾಸಕ ಜಿ.ಎಸ್ ಪಾಟೀಲ ಅವರಿಗೆ ವಹಿಸಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣ ದೊಡ್ಡಮನಿ (ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ) ಅವರು 50 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರು. ಹೀಗಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದರ ಋಣ ತೀರಿಸಲು ಕನೀಜ್ ಫಾತಿಮಾ ಅವರಿಗೆ ಸಚಿವ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು. ಆ ನಿರೀಕ್ಷೆ ಹುಸಿಯಾಗಿದೆ.
ಡಾ. ಅಜಯ್ ಸಿಂಗ್ ಸಚಿವರಾಗುವ ಮೂಲಕ ಕಲಬುರಗಿಗೆ ಮೂರು ಸಚಿವ ಸ್ಥಾನಗಳು ಸಿಕ್ಕಂತಾಗಿವೆ. ಹಿಂದಿನ ಎರಡು ಅವಧಿಯಲ್ಲಿ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ ಇಬ್ಬರೆ ಸಚಿವರಾಗಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿಲ್ಲೆಗೆ ಒಂದೆ ಒಂದು ಸಚಿವ ಸ್ಥಾನವೂ ಸಿಕ್ಕಿರಲಿಲ್ಲ.