ಸುದ್ದಿ ಸಂಗ್ರಹ ಕಾಳಗಿ
ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸೂಚಿಸಿದರು.
ತಾಲೂಕಿನ ಮಾಡಬೂಳ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಜನದಟ್ಟಣೆ ಇರುವ ಪ್ರದೇಶಗಳಲ್ಲಿ, ಶಾಲಾ- ಕಾಲೇಜುಗಳು ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಾಯಿಸುವಂತೆ ತಿಳಿಸಿದರು.
ಪ್ರತಿಯೊಬ್ಬ ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣಪತ್ರ ಮತ್ತು ವಾಹನ ವಿಮೆ ಹೊಂದಿರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಮತ್ತು ಮದ್ಯಪಾನದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಾಹನಗಳು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಸ್ಥಳದಲ್ಲಿ ಮತ್ತು ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡುವಂತೆ ಸೂಚಿಸಿದರು. ಒಂದು ವೇಳೆ ವಾಹನ ರಸ್ತೆ ಮಧ್ಯೆ ಕೆಟ್ಟು ನಿಂತಲ್ಲಿ ಕೂಡಲೆ ಜಿವಿಆರ್ ಟೋಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ವಾಹನದ ಪಾರ್ಕಿಂಗ್ ಲೈಟ್‌ಗಳನ್ನು ಆನ್ ಮಾಡಿ, ವಾಹನದ ಸುತ್ತಮುತ್ತ ಟ್ರಾಫಿಕ್ ಕೋನ್‌ಗಳು ಅಳವಡಿಸುವ ಮೂಲಕ ಅಪಘಾತ ತಡೆಗಟ್ಟುವಂತೆ ತಿಳಿಸಿದರು.
ಯಾವುದೆ ರಸ್ತೆ ಅಪಘಾತ ಸಂಭವಿಸಿದಲ್ಲಿ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಮಾಹಿತಿ ನೀಡಬೇಕು. ಗಾಯಾಳುಗಳಿಗೆ 108 ಆಂಬ್ಯುಲೆನ್ಸ್ ಸೇವೆ ಮೂಲಕ ಗೋಲ್ಡನ್ ಅವರ್ ಅವಧಿಯಲ್ಲಿ ಚಿಕಿತ್ಸೆ ದೊರಕುವಂತೆ ಆಸ್ಪತ್ರೆಗೆ ದಾಖಲಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವು ನೀಡಿ ಆಸ್ಪತ್ರೆಗೆ ದಾಖಲಿಸುವ ಪ್ರತಿಯೊಬ್ಬರಿಗೆ ಸರ್ಕಾರದ ‘ರಾಹ್-ವೀರ್ ಯೋಜನೆ’ ಅಡಿ ಪುರಸ್ಕಾರ ಮತ್ತು ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಸಭೆಯಲ್ಲಿ ಪಿಎಸ್ಐಗಳಾದ ಗೌತಮ, ಸಿದ್ದಲಿಂಗ (ತನಿಖೆ), ಠಾಣೆಯ ಸಿಬ್ಬಂದಿ ವರ್ಗ ಹಾಗೂ ಚಿತ್ತಾಪುರ, ಮಳಖೇಡ, ಸೇಡಂ ಲಾರಿ ಅಸೋಸಿಯೇಷನ್ ಅಧ್ಯಕ್ಷರು, ಲಾರಿ, ಟಿಪ್ಪರ್, ಬಲ್ಕರ್ ವಾಹನಗಳ ಮಾಲೀಕರು, ಚಾಲಕರು ಮತ್ತು ರಾಜ್ಯ ಹೆದ್ದಾರಿ-10ರ ಜಿವಿಆರ್ ಅಧಿಕಾರಿಗಳು ಉಪಸ್ಥಿತರಿದ್ದರು.