ಮಾತೆಯ ಮಮತೆಯ ಸವಿಯುಂಡವರೇ ಧನ್ಯರು: ಡಾ.ಲೀಲಾದೇವಿ ಆರ್ ಪ್ರಸಾದ್

ಸುದ್ದಿ ಸಂಗ್ರಹ

ಸುದ್ದಿ

ಸುದ್ದಿ ಸಂಗ್ರಹ ಚಿತ್ತಾಪುರ
ಜಗತ್ತಿನಲ್ಲಿ ಮಾತೆಯ ಪ್ರೀತಿಯಷ್ಟು ನಿಷ್ಕಲ್ಮಶವಾದದ್ದು ಮತ್ತೊಂದಿಲ್ಲ. ಅವಳ ಮಮತೆಯ ಸವಿಯನ್ನುಂಡವರೇ ಧನ್ಯರು ಎಂದು ಮಾಜಿ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ್ತಿ ಡಾ.ಲೀಲಾದೇವಿ ಆರ್ ಪ್ರಸಾದ ಹೇಳಿದರು.

ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಗುರುವಾರ ನಡೆದ ಶ್ರೀಮಠದ ಅನ್ನಪೂರ್ಣೆ, ಲಿಂ.ಗೌರಮ್ಮ ತಾಯಿಯವರ ಪುಣ್ಯೆಸ್ಮರಣೋತ್ಸವ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಮಾತೋಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರತಿಫಲವನ್ನು ನಿರೀಕ್ಷಿಸದೇ ಪ್ರೀತಿ ಕೊಡುವ ಏಕೈಕ ಜೀವ ಎಂದರೆ ಅದು ಅಮ್ಮ.ಅಂತಹ ಅಮ್ಮನನ್ನು ಪ್ರೀತಿಸುವ,ಗೌರವಿಸುವ ಕಾರ್ಯ ನಾಲವಾರ ಮಠದಲ್ಲಿ ನಡೆಯುತ್ತಿರುವುದು ನಾಡಿನ ಮಹಿಳಾ ಕುಲಕ್ಕೆ ಶ್ರೀಮಠ ಸಲ್ಲಿಸುತ್ತಿರುವ ಗೌರವದ ಸಂಕೇತವಾಗಿದೆ ಎಂದರು.

ನನಗೆ ಸುಮಾರು ನೂರಕ್ಕೂ ಹೆಚ್ಚು ಮಾನ-ಸಮ್ಮಾನಗಳು ಹಾಗೂ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.ಆದರೆ ಲಕ್ಷಾಂತರ ಭಕ್ತರ ಪಾಲಿಗೆ ಅನ್ನಪೂರ್ಣೆಯಾಗಿ ನಾಲವಾರ ಶ್ರೀಮಠದ ನಿಜವಾದ ಮಾತೆಯಾಗಿ ಬೆಳಗಿದ ಲಿಂ.ಗೌರಮ್ಮ ತಾಯಿಯವರ ಸ್ಮರಣಾರ್ಥವಾಗಿ ನೀಡಿರುವ ಮಾತೋಶ್ರೀ ಪ್ರಶಸ್ತಿ ನನಗೆ ಎಲ್ಲಾ ಪ್ರಶಸ್ತಿಗಳಿಗಿಂತ ಶ್ರೇಷ್ಠವಾಗಿರುವ ಭಾವ ಮೂಡಿದೆ.ಮನಸ್ಸು ತುಂಬಿ ಬಂದಿದೆ ಎಂದರು.

ಜಗತ್ತಿನಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ತಂದೆ ತಾಯಿಯನ್ನು ಕೊಲ್ಲುವ, ವೃದ್ಧಾಶ್ರಮಕ್ಕೆ ದೂಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾನವೀಯ ಸಂಬಂಧಗಳು ವ್ಯಾವಹಾರಿಕವಾಗುತ್ತಿವೆ. ಧಾರ್ಮಿಕ ಸಂಸ್ಕಾರಗಳಿಂದ ವಿಮುಖವಾಗಿ ಯುವ ಜನತೆ ಆಧುನಿಕತೆಯ ನಾಗಾಲೋಟದಲ್ಲಿ ಓಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ನಾಲವಾರದ ಮಠದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಜನಮಾನಸದಲ್ಲಿ ಭಕ್ತಿ ಮತ್ತು ನೈತಿಕತೆಯ ಸಂಸ್ಕಾರ ಬಿತ್ತುವ ಕಾಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ನಾಲವಾರ ಮಠಕ್ಕೂ ನನಗೂ ಹಳೆಯ ಸಂಬಂಧವಿದೆ.ಸ್ವತಃ ಶ್ರೇಷ್ಠ ಸಾಹಿತಿಗಳಾಗಿರುವ ಪೂಜ್ಯರು ಬರೆದ ಹನಿ ಅನುಭಾವ ಎನ್ನುವ ಕೃತಿಯನ್ನು 25 ವರ್ಷಗಳ ಹಿಂದೆ ಶ್ರೀಮಠದಲ್ಲಿ ನಾನೇ ಬಿಡುಗಡೆ ಮಾಡಿದ್ದೆ ಎಂದು ಹಳೆಯ ನೆನಪು ಮೆಲಕು ಹಾಕಿದರು. ನಾಲವಾರದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ಮಹಾಸ್ವಾಮಿಗಳ ಮಾತೆಯಾಗಿದ್ದ ಲಿಂ.ಗೌರಮ್ಮ ತಾಯಿಯವರು, ದಾಸೋಹ ಭಾವದೊಂದಿಗೆ ಇಡಿ ಜೀವನವನ್ನು ಸಮಾಜಕ್ಕೆ ಧಾರೆಯೆರೆದ ಮಹಾತಾಯಿಯಾಗಿದ್ದಾರೆ. ಅಂತಹ ಮಹಾತಾಯಿಯ ಸ್ಮರಣೋತ್ಸವವನ್ನು ಇಷ್ಟು ಅರ್ಥಪೂರ್ಣವಾಗಿ ಆಚರಿಸುವುದು ನೋಡಿದರೆ ಆ ತಾಯಿಯ ವ್ಯಕ್ತಿತ್ವದ ತೂಕ ನಮಗೆ ಅರ್ಥವಾಗುತ್ತದೆ ಎಂದು ಬಣ್ಣಿಸಿ, ಮಹಿಳೆಯರನ್ನು ಗೌರವಿಸುವ ಈ ಪರಿಪಾಠ ಶ್ರೀಮಠದಿಂದ ಅನೂಚಾನವಾಗಿ ಮುಂದುವರೆಯಲಿ ಎಂದು ಹಾರೈಸಿದರು.‌‌

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರ ಧರ್ಮಪತ್ನಿ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ದೇಶದಲ್ಲೆಡೆ ಮಾತ್ರವಲ್ಲ ಇಡಿ ಜಗತ್ತಿನಾದ್ಯಂತ ಮಾರ್ಚ್ ತಿಂಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನ ಪ್ರಕಾರದಲ್ಲಿ ಆಚರಿಸುತ್ತಾರೆ. ಆದರೆ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಮಹಾತಾಯಿ ಲಿಂ.ಗೌರಮ್ಮ ತಾಯಿಯವರ ಸ್ಮರಣೋತ್ಸವದ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸುವ ಅವಳ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆಯಾಗುತ್ತಿದೆ ಎಂದು ಬಣ್ಣಿಸಿದರು.

ಒಬ್ಬ ವೈದ್ಯಳಾಗಿ,ಅದರಲ್ಲೂ ಒಬ್ಬ ಹೆರಿಗೆ ತಜ್ಞೆಯಾಗಿ ನಾನು ಹೆಣ್ಣಿನ ಯಾತನೆಯನ್ನು,ಅವಳು ಪಡುವ ಕಷ್ಟವನ್ನು ಕಣ್ಣಾರೆ ಕಂಡಿದ್ದೇನೆ.ಪಡಬಾರದ ನೋವನ್ನು ಪಟ್ಟು ಮಕ್ಕಳನ್ನು ಹೆರುವ ಮಹಿಳೆ, ಮಗು ಹುಟ್ಟಿದ ತಕ್ಷಣವೇ ತಾನು ಪಟ್ಟ ಕಷ್ಟವನ್ನೆಲ್ಲಾ ಮರೆತು ಸಂಭ್ರಮಿಸುತ್ತಾಳೆ. ಹೆಣ್ಣಿನ ತ್ಯಾಗ ಮತ್ತು ಮಮತೆಯ ಉನ್ನತ ಸ್ಥಿತಿಯೆಂದರೆ ಅದು ತಾಯ್ತನ. ಅಂತಹ ತಾಯಿಯ ಸಂಸ್ಮರಣೆಯ ಕಾರ್ಯಕ್ರಮವನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿದ್ದು ನನ್ನ ಸೌಭಾಗ್ಯ ಎಂದರು.

ಸಮಾಜ ಸೇವಕಿ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರ ಧರ್ಮಪತ್ನಿ ಜಯಶ್ರೀ ಬಸವರಾಜ ಮತ್ತಿಮೂಡ ಮಾತನಾಡಿ,‌  ನಾಲವಾರ ಶ್ರೀಮಠ ನನಗೆ ತವರು ಮನೆಯ ಪ್ರೀತಿಯನ್ನು ನೀಡುತ್ತಾ ಬಂದಿದ್ದು,ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಜಿಗಳು ಪ್ರತಿಬಾರಿಯು ನನಗೆ ಅಪ್ಪ ಅಮ್ಮನ ಪ್ರೀತಿಯಿಂದ ನನಗೆ ಉಡಿತುಂಬಿ ಕಳಿಸುತ್ತಾರೆ ಎಂದು ಭಾವುಕರಾದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೀಠಾಧಿಪತಿ ಪರಮಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶರಣತತ್ವ ಪ್ರಸಾರಕ್ಕಾಗಿ ಜೀವನ ಸವೆಸುತ್ತಿರುವ ಹಿರಿಯ ಜೀವಿಗೆ ಮಾತೋಶ್ರೀ ಪ್ರಶಸ್ತಿ ಸಂದಿದ್ದು ಸಂತಸದ ವಿಚಾರ. ಪ್ರಾಮಾಣಿಕ ರಾಜಕಾರಣ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಒಬ್ಬ ಮಹಿಳೆಯಾಗಿ ಸಮರ್ಥವಾಗಿ ರಾಜಕಾರಣ ಮಾಡಿ, ಕಾರ್ಪೊರೇಟರ್ ಆಗಿ, ಶಾಸಕಿಯಾಗಿ, ಸಚಿವೆಯಾಗಿ ಜನಸೇವೆ ಮಾಡಿ ಭೇಷ್ ಎನ್ನಿಸಿಕೊಂಡ ಲೀಲಾದೇವಿ ಅವರು ಇಂದಿನ ಮಹುಳೆಯರಿಗೆ ಆದರ್ಶವಾಗಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ಜೀವಮಾನದ ಸಾಧನೆಯನ್ನು ಅನುಲಕ್ಷಿಸಿ, ಡಾ.ಲೀಲಾದೇವಿ ಆರ್ ಪ್ರಸಾದ ಅವರಿಗೆ ಶ್ರೀಮಠದ ಪ್ರತಿಷ್ಠಿತ “ಮಾತೋಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು……..ಕರಡಕಲ್ ಶ್ರೀ ಕೋರಿಸಿದ್ಧೇಶ್ವರ ಶಾಖಾಮಠದ ಶ್ರೀ ಶಾಂತರುದ್ರಮುನಿ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಲಿಂ.ಗೌರಮ್ಮ ತಾಯಿಯವರ ಸುಪುತ್ರಿ ಶಿವಲೀಲಾ ಯೋಗಾನಂದ ಮಳಿಮಠ, ಯಾದಗಿರಿ ಮತಕ್ಷೇತ್ರದ ಶಾಸಕರ ಧರ್ಮಪತ್ನಿ ಭೀಮಾಂಬಿಕಾ ಚನ್ನಾರೆಡ್ಡಿ ಪಾಟೀಲ ತುನ್ನೂರ, ನಾಗಮ್ಮ ಗೌಡ್ತಿ ಮಲ್ಲನಗೌಡ ಪೋಲಿಸ್ ಪಾಟೀಲ, ದೇವಕೆಮ್ಮಗೌಡ್ತಿ ಲಿಂಗಾರೆಡ್ಡಿ ಭಾಸರೆಡ್ಡಿ, ಸುಮಾ ವಿರೂಪಾಕ್ಷ ರೆಡ್ಡಿ ಇಟಗಿ,ಕಮಲಾದೇವಿ ಬೆಂಗಳೂರು, ನಿರ್ಮಲಮ್ಮ ಶ್ರೀಕಾಂತಗೌಡ ಮಡ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಿಂ.ಗೌರಮ್ಮ ತಾಯಿಯವರ ಸೋದರಳಿಯ ಶ್ರೀ ಸಿದ್ಧಯ್ಯ ಸ್ವಾಮಿ ಹಾಗೂ ಜಯಶ್ರೀ ಸಿದ್ಧಯ್ಯಸ್ವಾಮಿ ಚಿಕ್ಕಮಠ ವರಿಂದ ಪೂಜ್ಯ ಶ್ರೀಗಳವರ ತುಲಾಭಾರ ನೆರವೇರಿತು.

ಪುಣ್ಯಸ್ಮರಣೋತ್ಸವ ಪ್ರಯುಕ್ತ ಕಲಬುರಗಿಯ ಕುಸುಮ ಸಮಗ್ರ ಅಭಿವೃದ್ಧಿ ಸಂಸ್ಥೆ ಹಾಗೂ ಭಾರುಕಾ ಆಸ್ಪತ್ರೆಯ ವತಿಯಿಂದ ಶ್ರೀಮಠದ ಆವರಣದಲ್ಲಿ ದಿನಪೂರ್ತಿ ಉಚಿತ ನೇತ್ರ ತಪಾಸಣಾ ಶಿಬಿರ ನೆರವೇರಿತು.

ಶರಣಕುಮಾರ ಜಾಲಹಳ್ಳಿ ಹಾಗೂ ಸಿದ್ದು ಅವರಾದಿ ಪ್ರಾರ್ಥಿಸಿದರು, ಪೂಜಾ ಭಂಕಲಗಿ ನಿರೂಪಿಸಿದರು, ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು.

Leave a Reply

Your email address will not be published. Required fields are marked *