ಕಲಬುರಗಿ ಸೆಂಟ್ರಲ್ ‌ಜೈಲಿನಿಂದ‌ ಕೈದಿಗಳು ಪರಾರಿ: ಪತ್ತೆಗೆ ಮೂರು ತಂಡ ರಚನೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಗರದ ಹೊರವಲಯದ ಸೆಂಟ್ರಲ್ ಜೈಲಿನಿಂದ ಮಂಗಳವಾರ ನಸುಕಿನಲ್ಲಿ ಪರಾರಿಯಾಗಿರುವ ಮೂವರು ಅಪರಾಧಿಗಳ ಪತ್ತೆಗೆ ಮೂರು ತಂಡಗಳು ರಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್‌.ಡಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳೊಂದಿಗೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಿಗ್ಗೆ 4.30ರ ಹೊತ್ತಿಗೆ ಕೈದಿಗಳು ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಮೂವರು ಬೇರೆ–ಬೇರೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. ಅವರ ಪತ್ತೆಗೆ ಕಾನೂನು ಮತ್ತು ಸುವವಸ್ಥೆ ವಿಭಾಗದ ಡಿಸಿಪಿ ಶಾಲೂ ನೇತೃತ್ವದಲ್ಲಿ ಮೂವರು ಎಸಿಪಿಗಳ ನೇತೃತ್ವದ ತಂಡಗಳು ರಚಿಸಲಾಗಿದೆ. ಕೈದಿಗಳ ಪರಾರಿ ಕುರಿತು ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಜೈಲಿನ ಒಳಗೆ ಕಟ್ಟಡದ ಕಾಮಗಾರಿ ನಡೆಯುತಿತ್ತು. ಅಲ್ಲಿ ಏಣಿಯನ್ನು ಬಳಸಿ ಕಾಪೌಂಡ್‌ ಏರಿರುವ ಕೈದಿಗಳು, ವಿದ್ಯುತ್ ತಂತಿ ಬೇಲಿ ದಾಟಿ ಹೊರಗೆ ಇಳಿಯುವಾಗ ಒಂದು ಟೀ–ಶರ್ಟ್‌ ಮತ್ತು ಟವಲ್‌ನ್ನು ಹಗ್ಗದಂತೆ ಬಳಸಿ ಜಿಗಿದು ಪರಾರಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್ ತಂದೆ ಮಣಿಕಪ್ಪ, ಔರಾದ್ ತಾಲೂಕಿನ ಸಂತಾಪುರ ಗ್ರಾಮದ ಸಂತೋಷ ತಂದೆ ಬಸಪ್ಪ ಮತ್ತು ಬೀದರ್‌ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ತಂದೆ ಭೀಮರಾಯ ಪರಾರಿಯಾದ ಕೈದಿಗಳು.

ಈ‌ ಕೈದಿಗಳು ಬೇರೆ ಬೇರೆ ಪ್ರಕರಣದಲ್ಲಿ‌ ಸಜೆ‌ ಅನುಭವಿಸುತ್ತಿದ್ದರು.‌ ಎಲ್ಲರೂ 5ನೇ ಬ್ಯಾರಕ್‌ನಲ್ಲಿಯೇ ಇದ್ದರು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *