ಜು.14 ರಂದು ನಾಲವಾರದಲ್ಲಿ ತನಾರತಿ ವೈಭವ: ಆರಾಧ್ಯ ಗುರುವಿಗೆ ಹರಕೆ ಅರ್ಪಿಸಲಿರುವ ಭಕ್ತಸಾಗರ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾದ ಶ್ರೀಕ್ಷೇತ್ರ ನಾಲವಾರದಲ್ಲಿ ತಮ್ಮ ಹರಕೆ ಪೂರೈಸಿದರೆ ಪ್ರತೀಕವಾಗಿ ನೆರವೇರುವ ತನಾರತಿ ಸೇವೆಯನ್ನು ಆರಾಧ್ಯ ಸದ್ಗುರುವಿಗೆ ಸಲ್ಲಿಸುವ ವಿಶಿಷ್ಟ ಉತ್ಸವ ಮಂಗಳವಾರ ಮಧ್ಯರಾತ್ರಿ ಸಂಭ್ರಮದಿಂದ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹದೇವ ಗಂವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಪೀಠಾಧಿಪತಿ ಪರಮಪೂಜ್ಯ ಡಾ. ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಅತ್ಯಂತ ವೈಭವದಿಂದ ಶ್ರದ್ಧೆ ಭಕ್ತಿಯ ಮಧ್ಯೆ ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ತನಾರತಿ ಉತ್ಸವಕ್ಕೆ ಸಹಸ್ರಾರು ಭಕ್ತರ ಮಧ್ಯೆ ಜು.14ರಂದು ಮಣ್ಣೆತ್ತಿನ ಅಮಾವಾಸ್ಯೆಯ ದಿನವಾದ ವರ್ಷದ ಕೊನೆಯ ತನಾರತಿ ಉತ್ಸವ ಮಂಗಳವಾರ ಮಧ್ಯರಾತ್ರಿ ಭಕ್ತಿ ಭಾವದಿಂದ ನೆರವೇರಲಿದೆ ಎಂದರು.‌

ದಕ್ಷಿಣ ಭಾರತದ ಮಹಾದೀಪಮೇಳವೆಂದೆ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳಿಂದ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ಅರ್ಪಿಸಲಿದ್ದಾರೆ ಎಂದರು.

ಸದ್ಗುರು ಕೋರಿಸಿದ್ಧೇಶ್ವರ ಸನ್ನಿಧಿಯಲ್ಲಿ ವರ್ಷದ ಕೊನೆಯ ತನಾರತಿ ಉತ್ಸವವು ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಅತ್ಯಂತ ವೈಭವದಿಂದ ನಡೆಯಲಿದೆ ಎಂದರು‌.

ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ, ಪುಷ್ಪಾಲಂಕೃತವಾಗಿ, ತನಾರತಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕುವರು ಎಂದರು.

ಪುರವಂತಿಕೆ, ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ಆಂಧ್ರ ಪ್ರದೇಶ್ ಗದ್ವಾಲ್ ಮಂಗಳ ವಾದನದ ನಡೆದ ಈ ಉತ್ಸವ ಮಂಗಳವಾರ ಮಧ್ಯರಾತ್ರಿ ಪ್ರಾರಂಭವಾಗಿ ಬುಧುವಾರ ಬೆಳಗಿನ ಜಾವದ ವರೆಗೂ ನಡೆಯಿತು ಎಂದರು.

ಮಧ್ಯರಾತ್ರಿ ಸ್ನಾನಾದಿಗಳನ್ನು ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆಗಳನ್ನು ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆ ಅನುಭವಿಸಿದರು ಎಂದರು.‌

ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆಯನ್ನು ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠದ ಪಾರಂಪರಿಕ ಉತ್ಸವವಾಗಿದೆ ಎಂದರು.‌.

ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ರೀತಿಯ ವೈಶಿಷ್ಟ್ಯ ಪೂರ್ಣ ಉತ್ಸವ ನಾಡಿನ ಯಾವುದೆ ಭಾಗದಲ್ಲಿ ಕಾಣಸಿಗುವುದಿಲ್ಲ ಎಂದರು.

ನಾಲವಾರದ ತನಾರತಿ ಉತ್ಸವ ಮಹತ್ವದ್ದಾಗಿದ್ದು, ಜಾತಿ ಮತ ಪಂಥಗಳನ್ನು ಮರೆತು ಸಹಸ್ರಾರು ಭಕ್ತರ ಹರಕೆಯನ್ನು ಸಮರ್ಪಿಸುವ ದೃಶ್ಯ ನಯನಮನೋಹರ ಮಾತ್ರವಲ್ಲದೆ ಆಸ್ತಿಕ ಮನಸ್ಸುಗಳನ್ನು ಭಕ್ತಿಭಾವದಲ್ಲಿ ತೇಲಾಡುವಂತೆ ಮಾಡುತ್ತದೆ ಎಂದರು.‌

Leave a Reply

Your email address will not be published. Required fields are marked *