ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ಗೆ ಆರಂಭದಲ್ಲಿ ವಿಘ್ನ: ಸೇವಾಸಿಂಧು ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ

ಜಿಲ್ಲೆ

ಸುದ್ದಿ ಸಂಗ್ರಹ ಯಾದಗಿರಿ
ರಾಜ್ಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಯೋಜನೆ ಘೋಷಣೆ ಮಾಡಿರುವ ರಾಜ್ಯ ಸರಕಾರ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಉಚಿತ ಬಸ್‌ ಪಾಸ್‌ ಘೋಷಣೆ ಮಾಡಿರುವ ಆರಂಭದಲ್ಲೆ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷಗಳು ಎದುರಾಗಿದ್ದು, ಉಚಿತ ಬಸ್‌ ಪಾಸ್‌ಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಣ ಖರ್ಚು ಮಾಡಿಕೊಂಡು ನಗರಗಳಿಗೆ ಅಲೆಯುವಂತಾಗಿದೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ವಿಸ್ತರಿಸುವುದಾಗಿ ಘೋಷಿಸಿ ಶುಭ ಸುದ್ದಿ ನೀಡಿದ್ದರು.

ಆದರೆ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ಯೋಜನೆಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಪ್ರಕ್ರಿಯೆ ಆರಂಭವಾಗಿ ಒಂದು ವಾರ ಕಳೆದರೂ ವೆಬ್‌ಸೈಟ್‌ ಲಾಗಿನ್‌ ಸಮಸ್ಯೆ, ಒಟಿಪಿ ವಿಳಂಬ ಹಾಗೂ ದಾಖಲೆ ಅಪ್‌ಲೋಡ್‌ ಮಾಡಲಾಗದಂತಹ ತಾಂತ್ರಿಕ ತೊಂದರೆಗಳು ಎದುರಿಸುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕಂಪ್ಯೂಟರ್‌ ಕೇಂದ್ರಗಳು ಮತ್ತು ಗ್ರಾಮ ಒನ್‌ ಕೇಂದ್ರಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೆ ಕಾದರೂ ಅರ್ಜಿ ಸಲ್ಲಿಸಲಾಗದೆ ನಿರಾಶೆಯಿಂದಲೇ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉಚಿತ ಬಸ್‌ ಪಾಸ್‌ಗಾಗಿ ವಿದ್ಯಾರ್ಥಿಗಳು ತಮ್ಮ ಮೊಬೈಲ್‌, ಸೈಬರ್‌ ಸೆಂಟರ್‌, ಬೆಂಗಳೂರು ವನ್‌, ಕರ್ನಾಟಕ ವನ್‌ ಮತ್ತು ನಾಡ ಕಚೇರಿಗಳ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆದರೆ ಉಚಿತ ಬಸ್‌ ಪಾಸ್‌ ಯೋಜನೆ ಜಾರಿಗೊಂಡ ಬೆನ್ನಲ್ಲೆ ತಾಂತ್ರಿಕ ದೋಷಗಳಿಂದಾಗಿ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗದ ಪರಿಣಾಮ ವಿದ್ಯಾರ್ಥಿಗಳಿಗೆ ಅಸಮಾಧಾನ ಮೂಡಿಸಿದೆ.

ಉಚಿತ ಬಸ್‌ ಪಾಸ್‌ಗೆ ಅಗತ್ಯ ದಾಖಲೆಗಳೊಂದಿಗೆ ಬೆಳಗ್ಗೆಯೇ ಗ್ರಾಮೀಣ ಭಾಗಗಳಿಂದ ದೂರದ ಊರುಗಳಲ್ಲಿರುವ ಸೈಬರ್‌ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಉಚಿತ ಬಸ್‌ ಪಾಸ್‌ ಪ್ರಯೋಜನೆ ಪಡೆಯಲು ಗ್ರಾಮೀಣ ವಿದ್ಯಾರ್ಥಿಗಳು ದಿನಂಪ್ರತಿ ಹಣ ಖರ್ಚು ಮಾಡಿಕೊಂಡು ಬಸ್‌ ಟಿಕೆಟ್‌ ಪಡೆದು ಅಲೆಯುವಂತಾಗಿದೆ. ಶಾಲಾ, ಕಾಲೇಜುಗಳು ಆರಂಭವಾಗಿ ದಿನಗಳು ಉರುಳುತ್ತಿದ್ದರೂ, ಪಾಸ್‌ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ನಗದು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತಾಂತ್ರಿಕ ದೋಷಗಳನ್ನು ಶಾಶ್ವತವಾಗಿ ಸರಿಪಡಿಸುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಗಮಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ತಾಂತ್ರಿಕ ವೈಫಲ್ಯದಿಂದ ಉಚಿತ ಬಸ್‌ ಪಾಸ್‌ ಪ್ರಯೋಜನ ಪಡೆಯುವುದು ವಿಳಂಬವಾಗದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಸರ್ವರ್‌ ಸಾಮರ್ಥ್ಯ ಹೆಚ್ಚಿಸಬೇಕು ಎಂಬುದು ಪೋಷಕರ ಹಾಗೂ ವಿದ್ಯಾರ್ಥಿಗಳ ಆಗ್ರಹವಾಗಿದೆ.

Leave a Reply

Your email address will not be published. Required fields are marked *