ಸುದ್ದಿ ಸಂಗ್ರಹ ಕಲಬುರಗಿ
ಸಾಹಿತ್ಯವು ಸಮಾಜದ ವಾಸ್ತವತೆ, ಜೀವನ ಮೌಲ್ಯಗಳು ಮತ್ತು ಮಾನವೀಯ ಅನುಭವಗಳ ಪ್ರತಿಬಿಂಬವಾಗಿದ್ದು, ಕಾವ್ಯ ನಮ್ಮೊಳಗಿನ ಚಿಂತನೆ ಮತ್ತು ಸಂವೇದನೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಶೈಲಜಾ ಕೊಪ್ಪರ ಹೇಳಿದರು.
ನಗರದ ವಿಶ್ವರಾಧ್ಯ ಕಾಲೊನಿಯ ವಿಶ್ವಾಂಜನೆಯ ದೇವಸ್ಥಾನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ‘ಪುಷ್ಪ ಮಂಜರಿ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಿರುಪಮ ಗುರುರಾಜ ಮತ್ತು ಡಾ. ಅಂಬುಜಾ ಮಳಖೇಡ್ಕರ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಈ ಸಂಕಲನದಲ್ಲಿ ವಿವಿಧ ಕವಯಿತ್ರಿಯರ ಅನುಭವಸಮೃದ್ಧ ಕವಿತೆಗಳು ಅಡಕವಾಗಿವೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮಹಿಳೆಯರ ಬದುಕಿನ ಹೋರಾಟ, ಸಾಮಾಜಿಕ ಸಮಸ್ಯೆಗಳು ಮತ್ತು ಭಕ್ತಿ ಪ್ರಧಾನ ವಿಚಾರಗಳು ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ ಎಂದರು.
ಮೊಬೈಲ್ ಸಂಸ್ಕೃತಿಯ ಪ್ರಭಾವ, ಮಹಿಳೆಯರ ದೈನಂದಿನ ಸವಾಲುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಕುರಿತ ಕವಿತೆಗಳು ಓದುಗರಲ್ಲಿ ಚಿಂತನೆ ಮೂಡಿಸುವಂತಿವೆ ಎಂದು ಅಭಿಪ್ರಾಯಪಟ್ಟರು.
ದಾಸ ಸಾಹಿತ್ಯದ ಮಹತ್ವವನ್ನು ಉಲ್ಲೇಖಿಸಿದ ಅವರು, ದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದು, ಮಾನವೀಯ ಮೌಲ್ಯಗಳು, ಪ್ರೀತಿ, ಸಹಾನುಭೂತಿ ಮತ್ತು ಸಾತ್ವಿಕ ಬದುಕಿನ ಸಂದೇಶ ಸಾರಿದ್ದಾರೆ ಎಂದರು.
ಪುರಂದರದಾಸರು ಹಾಗೂ ಕನಕದಾಸರು ಸಮಾನತೆ, ಸೌಹಾರ್ದತೆ ಮತ್ತು ನೈತಿಕ ಬದುಕಿನ ಮಾರ್ಗವನ್ನು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ತೋರಿಸಿದ್ದಾರೆ. “ಆಚಾರವಿಲ್ಲದ ನಾಲಿಗೆ” ಹಾಗೂ “ಕುಲ-ಕುಲವೆಂದು ಹೊಡೆದಾಡದಿರಿ” ಎಂಬ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಠ್ಠಲರಾವ ಕುಲಕರ್ಣಿ ಮಾತನಾಡಿ, ಮಹಿಳೆಯರು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ಮಹಿಳೆ ಅಬಲೆ ಅಲ್ಲ, ಸಬಲೆ ಎಂಬುದನ್ನು ತಮ್ಮ ಪ್ರತಿಭೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಇದೆ ವೇಳೆ ಡಾ. ಅಂಬುಜಾ ಮಳಖೇಡ್ಕರ್ ಅವರ ಸಾಹಿತ್ಯ ಸೇವೆಯನ್ನು ಪ್ರಶಂಸಿಸಲಾಯಿತು.
ವೇದಿಕೆ ಮೇಲೆ ದೇವಸ್ಥಾನದ ಉಪಾಧ್ಯಕ್ಷ ಶರಣಗೌಡ ಪಾಟೀಲ ಉಪಸ್ಥಿತರಿದ್ದರು.
ನಿರುಪಮ ಗುರುರಾಜ ಕೃತಿಯ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ ನಡೆದ ಮಕ್ಕಳ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಶಿಲ್ಪಾ ಸುಧೀಂದ್ರ ದಾಸ ಹಾಗೂ ಡಾ.ಪ್ರತಿಭಾ ಗುಡದೂರು ಕವನ ವಾಚನ ನಡೆಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕವಯಿತ್ರಿಯರು ಮತ್ತು ಗಣ್ಯರು ಭಾಗವಹಿಸಿ ಕೃತಿಯ ಯಶಸ್ಸಿಗೆ ಶುಭ ಹಾರೈಸಿದರು.
ವೈಷ್ಣವಿ ವಂದನಾರ್ಪಣೆ ಮಾಡಿದರು.