ಗೃಹಬಳಕೆ ಎಲ್‍ಪಿಜಿ ದರ ಏರಿಕೆ: 3 ತಿಂಗಳಲ್ಲಿ 2ನೇ ಬಾರಿ ಹೆಚ್ಚಳ, ಈಗ ಏರಿಕೆಯಾಗಿದ್ದೆಷ್ಟು ?

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾದ ಬಳಿಕ ಕಳೆದ 3 ತಿಂಗಳಲ್ಲಿ 2ನೇ ಬಾರಿಗೆ ಗೃಹಬಳಕೆ ಎಲ್‍ಪಿಜಿ ದರ ಹೆಚ್ಚಳ ಕಂಡಿದೆ. ಇಂದು ಬರೋಬ್ಬರಿ 29 ರೂ ಏರಿಕೆಯಾಗಿದೆ.

ಒಟ್ಟಿನಲ್ಲಿ 14.2 ಕೆಜಿ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ 913 ರಿಂದ 942ಕ್ಕೆ ಏರಿಕೆಯಾಗಿದೆ. ಈ ದರ ಇಂದಿನಿಂದ ಜಾರಿಯಾಗಲಿದೆ.

ಜಾಗತಿಕ ತೈಲ ಹಾಗೂ ಇಂಧನಗಳ ಪೂರೈಕೆಯಲ್ಲಿ ಬಿಕ್ಕಟ್ಟು ಏರ್ಪಟ್ಟಿರುವುದರಿಂದ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ನಗರದಿಂದ ನಗರಕ್ಕೆ ಹೊಸ ದರದಲ್ಲಿ ವ್ಯತ್ಯಾಸ ಇರಲಿದೆ. ಈ ಹಿಂದೆ ಮಾರ್ಚ್ 7ರಂದು ಸಿಲಿಂಡರ್’ಗೆ 60 ರೂ ಹೆಚ್ಚಳ ಮಾಡಿದ ನಂತರ, ಈಗ ಎರಡನೇ ಬಾರಿಗೆ 29 ರೂ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳವು ದೇಶೀಯ ಎಲ್‍ಪಿಜಿ ಮಾರಾಟದ ಮೇಲಿನ ನಷ್ಟವನ್ನು ಭಾಗಶಃ ಸರಿದೂಗಿಸಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ವಾಣಿಜ್ಯ ಸಿಲಿಂಡರ್ ಅಂತೂ ಈ ಹಿಂದೆಯೇ ಭಾರಿ ಬೆಲೆ ಏರಿಕೆಯಿಂದ ದುಬಾರಿಯಾಗಿದೆ. ಲಭ್ಯತೆ ಕೊರತೆಯಿಂದಲೂ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ, ಹೋಟೆಲ್’ಗಳ ತಿಂಡಿ- ಊಟದ ದರವೂ ಗಗನಕ್ಕೆರಿದೆ. ಹೋಟೆಲ್ ಉದ್ಯಮಿಗಳು ನಷ್ಟ ತಪ್ಪಿಸಲು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದ್ದಾರೆ. ಮದ್ಯಪ್ರಾಚ್ಯ ಬಿಕ್ಕಟ್ಟು ಹೊಗುವವರೆಗೂ ಈ ಬೆಲೆ ಏರಿಕೆಯ ಬಿಸಿ ಹೀಗೆ ಮುಂದುವರಿಯುವ ಸಾಧ್ಯತೆ ಇದೆ.

ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಆಮದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಎಲ್‍ಪಿಜಿ ಲಭ್ಯತೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಗುರುವಾರ ತಿಳಿಸಿದ್ದರು. ಅಲ್ಲದೆ ಗೃಹಬಳಕೆಯ ಸಿಲಿಂಡರ್ ಮೇಲಿನ ಅಂಡರ್ ರಿಕವರಿ ಅಂದರೆ ನಷ್ಟ ಸರಿದೂಗಿಸುವ ಭರ್ತಿ ವೆಚ್ಚ, ಇಂದಿಗೂ ಪ್ರತಿ ಸಿಲಿಂಡರ್’ಗೆ ಸುಮಾರು 700 ರೂ ಆಸುಪಾಸಿನಲ್ಲೇ ಇದೆ ಎಂದಿದ್ದರು.

Leave a Reply

Your email address will not be published. Required fields are marked *