ಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿ: ಬಿ.ಕೆ ಹರಿಪ್ರಸಾದ್

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ಅಧಿಕಾರ ಹಾಗೂ ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಹೋಗಿ. ಪಕ್ಷ, ಹೋರಾಟ, ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ. ಇದರಲ್ಲಿ ಯಾವುದೆ ಬಣವಿಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ನಾನು ಪಕ್ಷದಲ್ಲಿ ತೊಡಗಿಸಿಕೊಂಡಿದ್ದೆನೆ. ನಾನು ವರಿಷ್ಠರ ಬಳಿ ಹೋಗಿ ಯಾವತ್ತೂ ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ. ನಾನು ಅಧಿಕಾರಕ್ಕಾಗಿ ಪಕ್ಷದಲ್ಲಿ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಸಿಪಾಯಿ. ನಮ್ಮ ಹಿರಿಯರ ಆದರ್ಶ ಪಾಲಿಸಿಕೊಂಡು ಜವಾಬ್ದಾರಿ ನಿರ್ವಹಿಸುತ್ತೆನೆ ಎಂದು ಜವಾಬ್ದಾರಿ ಹೆಗಲೇರಿಸಿಕೊಂಡಿದ್ದಾರೆ.

ನಾನು ಹಿಂದುಳಿದ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದು ಮುಖ್ಯವಲ್ಲ. ನಾನು ಮುಂದುವರೆದವರಿಗಿಂತ ಮುಂದುವರೆದವನು. 2028ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಅನ್ನೋದು ವಾಟ್ಸಪ್ ಯುನಿವರ್ಸಿಟಿಯ ಅಪಪ್ರಚಾರ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಎಸ್‌ಐಆರ್, ಸಿಎಎ ವಿರುದ್ಧ ಹೋರಾಡುವ ಜವಾಬ್ದಾರಿ ಇದೆ. ಅಧಿಕಾರ ನನಗೆ ಮುಖ್ಯವಲ್ಲ, ನಾವು ಬೀದಿಗಿಳಿದು ಹೋರಾಟ ಮಾಡಬೇಕು ಎಂದಿದ್ದಾರೆ.

ಗುಜರಾತ್ ಮಾಡೆಲ್ ನಮಗೆ ಬೇಕಿಲ್ಲ, ಬದಲಾಗಿ ಕರ್ನಾಟಕ ಮಾಡೆಲ್ ಬಗ್ಗೆ ನಮಗೆ ಹೆಮ್ಮೆ ಇದೆ. ಸರ್ಕಾರ ಮತ್ತು ಪಕ್ಷದಲ್ಲಿ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೆವೆ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

Leave a Reply

Your email address will not be published. Required fields are marked *