ಸುದ್ದಿ ಸಂಗ್ರಹ ಬೆಂಗಳೂರು
ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೆ.ಸಿ ಚಂದ್ರಶೇಖರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 3 ರಂದು ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿದೆ. ಅದೆ ದಿನ ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ ನಡೆಯಲಿದೆ ಎಂದರು.
ಆರಂಭದಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಬರಬೇಕು, ಅದಕ್ಕಾಗಿ ಬಸ್ ಬುಕಿಂಗ್ ಮಾಡಬೇಕು ಅಂತ ತೀರ್ಮಾನ ಮಾಡಲಾಗಿತ್ತು. ಆದ್ರೆ ಕಾರಣಾಂತರದಿಂದ ಈಗ ಆಡಂಬರ ಬೇಡ ಅನ್ನೋ ತೀರ್ಮಾನ ಮಾಡಿದ್ದೇವೆ. ಸರಳವಾಗಿ ಕಾರ್ಯಕ್ರಮ ನಡೆಸುತ್ತೆವೆ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಆಡಂಬರ ಬೇಡ, ಒಂದೊಳ್ಳೆ ಸರ್ಕಾರ ಕೊಡೋಣ ಅಂತ ಪಕ್ಷದಿಂದ ತೀರ್ಮಾನ ಮಾಡಿದ್ದೆವೆ. ಅದಕ್ಕಾಗಿ ಸಾರ್ವಜನಿಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಾರದಂತೆ ಮನವಿ ಮಾಡ್ತಿದ್ದೆವೆ ಎಂದು ವಿವರಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಸಾಮಾನ್ಯ ಪಾಸ್, ಸ್ಪೆಷಲ್ ಪಾಸ್ ಯಾವುದೂ ಇರೋದಿಲ್ಲ. ಹೆಚ್ಚಿನ ಕಾರ್ಯಕರ್ತರಿಗೂ ಅವಕಾಶ ಇರಲ್ಲ. ಪಕ್ಷದ ಶಾಸಕಾಂಗ ಸಭೆ ಬಳಿಕ ಸಚಿವರ ಪ್ರಮಾಣ ವಚನ ನಿರ್ಧಾರ ಆಗುತ್ತೆ. ಎಷ್ಟು ಜನ ಸಚಿವರಾಗಿ ಪ್ರಮಾಣ ತೆಗೆದುಕೊಳ್ಳಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.