ಸುದ್ದಿ ಸಂಗ್ರಹ ಬೆಂಗಳೂರು
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆ ಮತ್ತು ಪ್ರಮಾಣವಚನ ಸ್ವೀಕಾರದ ಸಿದ್ಧತೆಗಳು ನಡೆಯುತ್ತಿವೆ. ಬಹುತೇಕ ಸೋಮವಾರ ಗೋಧೂಳಿ ಸಮಯದಲ್ಲಿ ಡಿ.ಕೆ ಶಿವಕುಮಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣವಚನಕ್ಕೆ ಸಿದ್ಧತೆ ನಡೆಯುತ್ತಿದೆ. ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಲು ಡಿಕೆಶಿ ಆಸಕ್ತಿ ತೋರಿಸಿದ್ದು, ಉಪ ಮುಖ್ಯಮಂತ್ರಿ ಸೇರಿದಂತೆ 8 ಮಂದಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಬೇಕೆಂಬ ಒತ್ತಡ ಹಿರಿಯ ನಾಯಕರಿಂದ ಕೇಳಿಬರುತ್ತಿದೆ. ಅಂತಿಮವಾಗಿ ರಾಹುಲ್ ಗಾಂಧಿ ನಿರ್ಧಾರದ ಮೇಲೆ ಎಲ್ಲವೂ ಅಂತಿಮವಾಗಲಿದೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್ಪಿ ಸಭೆ ನಡೆಯಲಿದ್ದು, ನೂತನ ನಾಯಕನಾಗಿ ಡಿ.ಕೆ ಶಿವಕುಮಾರ್ ಹೆಸರು ಅಂತಿಮವಾಗಲಿದೆ. ಸಿದ್ದರಾಮಯ್ಯ ಡಿಕೆಶಿ ಹೆಸರನ್ನು ಪ್ರಸ್ತಾಪಿಸಲಿದ್ದು, ಕೇಂದ್ರ ನಾಯಕರಾದ ವೇಣುಗೋಪಾಲ್ ಹಾಗೂ ಸುರ್ಜೇವಾಲ ಅನುಮೋದಿಸಲಿದ್ದಾರೆ. ಬಳಿಕ ಲೋಕಭವನಕ್ಕೆ ತೆರಳಿ ಹೊಸ ಸಂಪುಟ ರಚನೆಗೆ ಡಿಕೆಶಿ ಹಕ್ಕು ಮಂಡಿಸಲಿದ್ದಾರೆ.