ಸುದ್ದಿ ಸಂಗ್ರಹ ವಾಡಿ
ನನೆಗುದಿಗೆ ಬಿದ್ದಿದ್ದ ಪಟ್ಟಣದ ಸುಸಜ್ಜಿತ ಮಾದರಿಯ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಹಿಡಿದಿದ್ದ ಗ್ರಹಣ ಕಳಚಿದೆ.
ನಾಲ್ಕೈದು ವರ್ಷಗಳಿಂದ ಕಮರವಾಡಿ ರಸ್ತೆಯ ಪಕ್ಕದ 2 ಎಕರೆ ಪ್ರದೇಶದಲ್ಲಿ ಸುಸುಜ್ಜಿತ ಬಸ್ ನಿಲ್ದಾಣ ಕಾಮಗಾರಿಗೆ ಪಿಲ್ಲರ್ ಹಾಕಿ ನಂತರ ನಾಪತ್ತೆಯಾಗಿದ್ದ ಅಧಿಕಾರಿಗಳು ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ಪಾಟೀಲ ಅವರ ನೇತೃತ್ವದಲ್ಲಿ ಭೇಟಿ ನೀಡಿ ಉದ್ದೇಶಿತ ಜಾಗದ ಪರಿಶೀಲನೆ ನಡೆಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2.5 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 2.5 ಕೋಟಿ ಅನುದಾನ ಸಹಿತ ಒಟ್ಟು 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೈಟೆಕ್ ಬಸ್ ನಿಲ್ದಾಣ ಇದಾಗಿದೆ. ಕಮರವಾಡಿ ಒಳ ರಸ್ತೆಯಲ್ಲಿ 5 ಕೋಟಿ ಮೊತ್ತ ವ್ಯಯಿಸಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರ ನಡುವೆ ಇದೆ ಸಂದರ್ಭದಲ್ಲಿ ತೀವ್ರ ಚರ್ಚೆ ನಡೆಯಿತು.
ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ=150ರ ಪಕ್ಕ ಕನಿಷ್ಠ 2 ಎಕರೆ ಜಾಗ ಗುರುತಿಸಿ ಅಲ್ಲಿಯೇ ನಿಲ್ದಾಣ ನಿರ್ಮಿಸುವ ಬಗ್ಗೆ ಒಂದೊಮ್ಮೆ ಜಾಗ ಸಿಗದಿದ್ದರೆ ಉದ್ದೇಶಿತ ಸ್ಥಳದಲ್ಲಿಯೇ ಕಾಮಗಾರಿ ಆರಂಭಿಸುವ ಬಗ್ಗೆ ಚರ್ಚೆ ನಡೆಯಿತು. ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ.ಸುಶೀಲಾ, ಎಇಇ ಶಂಶುದ್ದಿನ್ ಶಹೀನ್, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಜಿ.ಗಂಗಾಧರ, ಕಾಮಗಾರಿ ಮುಖ್ಯ ಎಂಜಿನಿಯರ್ ಬೋರಯ್ಯ ಹಾಜರಿದ್ದರು.