ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಶೈಕ್ಷಣಿಕ ಪ್ರವಾಸಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಶೈಕ್ಷಣಿಕ ಪ್ರವಾಸಗಳಿಗೆ ಇದೀಗ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಿವೆ. ಇತ್ತೀಚೆಗೆ ವಿದ್ಯಾರ್ಥಿಗಳ ಪ್ರವಾಸ ಬಸ್ ಅಪಘಾತವಾದ ಹಿನ್ನೆಲೆ, ಕಾಲೇಜು ಶಿಕ್ಷಣ ಇಲಾಖೆ ಸುರಕ್ಷತೆಗೆ ಆದ್ಯತೆ ನೀಡಿ ಹೊಸ ಮಾರ್ಗಸೂಚಿ ಹೊರಡಿಸಿದೆ.

ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಅನುಭವ, ಸ್ನೇಹ ಮತ್ತು ಜ್ಞಾನ ನೀಡುವ ವಿಶೇಷ ಕ್ಷಣ. ಆದರೆ ಇತ್ತೀಚಿನ ಕೆಲವು ಅವಘಡಗಳು ಕಾಲೇಜು ಪ್ರವಾಸಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದವು. ಇದೆ ಕಾರಣದಿಂದಾಗಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಪ್ರವಾಸಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ.

ಇನ್ನು ಮುಂದೆ ಯಾವುದೆ ಶೈಕ್ಷಣಿಕ ಪ್ರವಾಸಕ್ಕೂ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಒಂದು ದಿನದ ಸ್ಥಳೀಯ ಪ್ರವಾಸವಾಗಲಿ, ನಾಲ್ಕೈದು ದಿನಗಳ ದೂರದ ಪ್ರವಾಸವಾಗಲಿ, ಅನುಮತಿ ಪಡೆಯದೆ ಪ್ರವಾಸಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಪ್ರವಾಸ ಆರಂಭಿಸುವ ಮೊದಲು ಸಮೀಪದ ಪೊಲೀಸ್ ಠಾಣೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂಬ ಸೂಚನೆಯೂ ನೀಡಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಇಲಾಖೆ, ನದಿ, ಸಮುದ್ರ, ಜಲಪಾತ, ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟ ಪ್ರದೇಶಗಳಂತಹ ಅಪಾಯಕಾರಿ ತಾಣಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದನ್ನೇ ನಿಷೇಧಿಸಿದೆ. ಅಪಾಯಕಾರಿ ಸೆಲ್ಫಿ, ಸಾಹಸ ಚಟುವಟಿಕೆಗಳು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದಕ್ಕೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.ಪೊಲೀಸ್ ಠಾಣೆಗೆ ಮಾಹಿತಿ ಕಡ್ಡಾಯ, ಅಪಾಯಕಾರಿ ಸ್ಥಳಗಳಿಗೆ ನಿಷೇಧ, ಪೋಷಕರ ಮುಚ್ಚಳಿಕೆ ಪತ್ರ ಕಡ್ಡಾಯ, ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕ ಕಡ್ಡಾಯ, ಪ್ರವಾಸದ ವೇಳೆ ವಿದ್ಯಾರ್ಥಿಗಳು ಗುಂಪಿನಿಂದ ದೂರ ಹೋಗಬಾರದು. ಸ್ಥಳೀಯ ಸೂಚನಾ ಫಲಕಗಳು ಮತ್ತು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ ಸುರಕ್ಷತಾ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ಅತಿಯಾದ ನಿಯಂತ್ರಣ ವಿದ್ಯಾರ್ಥಿಗಳ ಪ್ರವಾಸ ಅನುಭವಕ್ಕೆ ಅಡ್ಡಿಯಾಗಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ

Leave a Reply

Your email address will not be published. Required fields are marked *