ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಗೆಲುವು: ಇಂದು ಸಂಜೆ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ನವದೆಹಲಿ
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ, ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.

ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿ ವಿಜಯಮಾಲೆಯನ್ನು ತನ್ನದಾಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ಅಲ್ಲಿ ನೆರೆಯಲಿರುವ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ .

ಈ ಮಹತ್ವದ ಬೆಳವಣಿಗೆಯನ್ನು ಬಿಜೆಪಿಯ ಮುಖ್ಯ ವಕ್ತಾರ ಅನಿಲ್ ಬಲೂನಿ ಅವರು ಸಾಮಾಜಿಕ ಮಾಧ್ಯಮ ‘X’ ನಲ್ಲಿ ಖಚಿತಪಡಿಸಿದ್ದು, “ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಇಂದು ಸಂಜೆ 6 ಗಂಟೆಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.

ಬಂಗಾಳದಲ್ಲಿ ಕೇಸರಿ ಅಲೆ
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಳ್ವಿಕೆಗೆ ತೆರೆ ಬೀಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಅಸ್ಸಾಂ: ಅಸ್ಸಾಂನಲ್ಲಿಯೂ ಆಡಳಿತಾರೂಢ ಬಿಜೆಪಿ ಮೈತ್ರಿಕೂಟವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ದಾಪುಗಾಲು ಹಾಕಿದೆ. ಇಲ್ಲಿ ಕಾಂಗ್ರೆಸ್ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದೆ.

ಪುದುಚೇರಿ: ಪುದುಚೇರಿಯಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಅಧಿಕಾರವನ್ನು ಉಳಿಸಿಕೊಳ್ಳುವ ಹಾದಿಯಲ್ಲಿದೆ.

ಮೋದಿ ನಾಯಕತ್ವಕ್ಕೆ ಸಂದ ಜಯ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಂಗಾಳದ ಜನತೆ ಬದಲಾವಣೆಯ ಪರವಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

ನಂದಿಗ್ರಾಮದಿಂದ ಮರು ಆಯ್ಕೆ ಬಯಸಿರುವ ಹಾಗೂ ಭವಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ರಾಜ್ಯದ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ” ಎಂದಿದ್ದಾರೆ.

ಇತರ ರಾಜ್ಯಗಳ ಫಲಿತಾಂಶದ ಚಿತ್ರಣ
ಇದೆ ವೇಳೆ ತಮಿಳುನಾಡಿನಲ್ಲಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವು ಭರ್ಜರಿ ಪದಾರ್ಪಣೆ ಮಾಡಿದ್ದು, ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ದೊಡ್ಡ ರಾಜಕೀಯ ಅಚ್ಚರಿ ಮೂಡಿಸಿದೆ. ಅಲ್ಲಿ ಆಡಳಿತಾರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಸಾಧಿಸಿದ್ದರೆ, ಎಡರಂಗ (ಸಿಪಿಎಂ) ಹಿನ್ನಡೆ ಅನುಭವಿಸಿದೆ.

Leave a Reply

Your email address will not be published. Required fields are marked *