ಭೀಮ ಗಾಯನ ಹೆಸರಿನಲ್ಲಿ ರಾಜಕೀಯ: ವಿಕ್ರಮ್ ತೇಜಸ್ ಆಕ್ರೋಶ‌

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ 
ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರು ಭೇಟಿ ನೀಡಿದ ಹತ್ತು ಊರುಗಳಲ್ಲಿ ಭೀಮ ಗಾಯನ ಕಾರ್ಯಕ್ರಮ ಹಮ್ಮಿಕೊಂಡ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅಂಬೇಡ್ಕರ್ ಅವರು ಭೇಟಿ ನೀಡಿದ ವಾಡಿ ಪಟ್ಟಣ ಮರೆತು ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ವಾರ್ತಾ ಇಲಾಖೆ ರಾಜಕಾರಣ ಮಾಡಿದೆ ಎಂದು ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1944 ಸೆಪ್ಟೆಂಬರ್ 20 ಹಾಗೂ 1952 ಎಪ್ರಿಲ್ 27ರಂದು ವಾಡಿ ಪಟ್ಟಣಕ್ಕೆ ಎರಡು ಸಲ ಐತಿಹಾಸಿಕ ಭೇಟಿ ನೀಡಿದ್ದರು, ಆದರೆ ಈ ಬಗ್ಗೆ ಕಾರ್ಯಕ್ರಮ ಆಯೋಜಕರಿಗೆ ಕನಿಷ್ಠ ಅರಿವು ಇಲ್ಲದಿರುವುದು ದುರಂತ. ಇದು ವಾಡಿ ಪಟ್ಟಣಕ್ಕೆ ಅಂಬೇಡ್ಕರ್ ಅವರು ಭೇಟಿ ನೀಡಿರುವ ಇತಿಹಾಸ ತಿರುಚುವ ಕುಯುಕ್ತಿಯಾಗಿದೆ ಎಂದರು.

ವಾಡಿ ಪಟ್ಟಣಕ್ಕೆ ಎರಡು ಸಲ ಭೇಟಿ ನೀಡಿದ್ದರ ನೆನಪಿಗಾಗಿ ಭೀಮ ಗಾಯನ ಶೀರ್ಷಿಕೆ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಟ್ಟಣದ ಜನರಿಗೆ ಕನಿಷ್ಠ ಮಾಹಿತಿ ನೀಡಿಲ್ಲ. ಅಂದು ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅಮೃತರಾವ ಕೋಮಟೆ ಅವರ ಮಗ ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅವರಿಗೆ ಅಂಬೇಡ್ಕರ್ ಭೇಟಿಯ ಬಗ್ಗೆ ಮಾಹಿತಿಯಿತ್ತು. ಅವರನ್ನು ಮಾತನಾಡಲು ಕರೆಸಬಹುದಿತ್ತು ಎಂದರು.

ಸ್ವಾಗತ ಕೋರಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಡಿಯಪ್ಪ ಗೆದ್ಲಗಟ್ಟಿ ಅವರು, ವಿನೂತನ ಮತ್ತು ವಿಶಿಷ್ಟ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮದ ಬಗ್ಗೆ ಕನಿಷ್ಠ ಸಿದ್ದತೆ ಮಾಡಿಕೊಳ್ಳದೆ ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅಂಬೇಡ್ಕರ್ ಜೀವನ ಸಂಘರ್ಷದ ಬಗ್ಗೆ ಸಾರ್ವಜನಿಕರಿಗೆ ಮನಸ್ಸಿಲ್ಲ. ಸರ್ಕಾರದ ಆದೇಶ ಇದೆ ಅಂತ ಕಾಟಾಚಾರದ ಕಾರ್ಯಕ್ರಮ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರೂಪಣೆ ಮಾಡಿದ ಅರುಣ ಜೋಳದ ಕೂಡ್ಲಗಿ ವಾಡಿ ಪಟ್ಟಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿರುವ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದನ್ನು ಹೊರತುಪಡಿಸಿ ಯಾರೊಬ್ಬ ಅಧಿಕಾರಿಗೂ ಈ ಬಗ್ಗೆ ಮಾತನಾಡದಿರುವುದು ನೋವಿನ ಸಂಗತಿ ಎಂದರು.

ದಲಿತ ಕಲಾ ಮಂಡಳಿಯ ಕಲಾವಿದರು, ಇತರೆ ಕಲಾ ತಂಡಗಳನ್ನಾಗಲಿ ಕರೆಯದೆ ಇಲಾಖೆಯ ಅಧಿಕಾರಿಗಳು ಸ್ಥಳೀಯ ಕಲಾವಿದರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *