ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಜನರ ಬಹುಕಾಲದ ಕನಸಾಗಿದ್ದ ಪ್ರಜಾಸೌಧ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು, ಮುಂದಿನ ದಿನಗಳಲ್ಲಿ ತಾಲೂಕಿಗೆ ಅಗತ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಂತವಾಗಿ ಸ್ಥಾಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ, ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದ ಅವರು, ಕಾಳಗಿ- ಚಿಂಚೋಳಿ ತಾಲೂಕಿನ ಅಭಿವೃದ್ಧಿಗೆ 60 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.
ಕಾಳಗಿ ತಾಲೂಕಿನ ಸರ್ವರಿಗೂ ಒಂದೆ ಸೂರಿನಡಿ ವಿವಿಧ ಇಲಾಖೆಗಳ ಸೌಲಭ್ಯ ಒದಗಿಸುವ ಉದ್ದೇಶದಿಂದ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ, ಸೂರ್ಯನಾರಾಯಣ ದೇವಸ್ಥಾನ ಸಂರಕ್ಷಣೆಗೆ 4.17ಕೋಟಿ ಮೀಸಲಿಡಲಾಗಿದೆ. ಇನ್ನೂ ಅವಶ್ಯಕತೆ ಇದ್ದಲ್ಲಿ 50 ಕೋಟಿ ನೀಡಲು ಸಿದ್ಧನಿದ್ದೆನೆ, ಕಾಳಗಿ ತಾಲೂಕು ಅಭಿವೃದ್ಧಿ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದರು.
ಕಾಳಗಿ- ಚಿಂಚೋಳಿ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತರಿಗೆ ಅನುಕೂಲವಾಗುವಂತೆ ವೇರ್’ಹೌಸ್ ಮತ್ತು ಕೋಲ್ಡ್ ಸ್ಟೊರೇಜ್ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ರೈತ ಭವನ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಡಾ.ಅವಿನಾಶ್ ಜಾಧವ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಳಗಿ ಮತ್ತು ಚಿಂಚೋಳಿ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದಾರೆ ಎಂದು ಪ್ರಶಂಸಿಸಿದರು.
ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಳಜಿಯಿಂದ ಕಾಳಗಿ ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ, ಸೂರ್ಯನಾರಾಯಣ ದೇವಸ್ಥಾನ 4.5 ಕೋಟಿ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದು ಹರ್ಷದಾಯಕವಾಗಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ, ಜಿ.ಪಂ ಮಾಜಿ ಸದಸ್ ರಾಜೇಶ್ ಗುತ್ತೇದಾರ ಮಾತನಾಡಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕೆಕೆಆರ್’ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ ಸಿಇಒ ಭಂವರಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಡಿಸಿ ರಾಯಪ್ಪ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಟ್ಟಿ, ಎಸಿ ಪ್ರಭುರೆಡ್ಡಿ, ಜಿ.ಪಂ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಕಾಳಗಿ ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ ಇಒ ಡಾ.ಬಸಲಿಂಗಪ್ಪ ಡಿಗ್ಗಿ, ಪ.ಪಂ ಮುಖ್ಯಾಧಿಕಾರಿ ಪಂಕಜ ಎ, ಜವಹಾರ ಬಾಲಭವನ ರಾಜ್ಯ ಉಪಾಧ್ಯಕ್ಷ ಅನೀಲಕುಮಾರ ಜಮಾದಾರ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ರಾಠೋಡ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಕಾಳಗಿ- ಕೋಡ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವಿಂದ್ರಪ್ಪ ಸಾಲಹಳ್ಳಿ, ಜಿ.ಪಂ ಮಾಜಿ ಅಧ್ಯಕ್ಷ ಭೀಮರಾವ ಟಿಟಿ, ರಾಜ್ಯ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಜಿ.ಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಯುವ ಘಟಕದ ಅಧ್ಯಕ್ಷ ಪ್ರದೀಪ್ ಡೊಣ್ಣೂರ ಸೇರಿದಂತೆ ಅನೇಕರು ಇದ್ದರು.