ಸುದ್ದಿ ಸಂಗ್ರಹ ಶಹಾಬಾದ
ಮೂಲಭೂತ ಸೌಲಭ್ಯ ಮತ್ತು ಸಾರ್ವಜನಿಕರ ಕುಂದು ಕೊರತೆಗೆ ಪೌರಾಯುಕ್ತರು ಸ್ಪಂದನೆ ಮಾಡಬೇಕು ಎಂದು ದಸಂಸ(ಅಂಬೇಡ್ಕರವಾದ)ದ ತಾಲೂಕಿನ ಸಂಚಾಲಕ ಸುಭಾಷ ಸಾಕ್ರೆ ಒತ್ತಾಯಿಸಿದರು.
ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ ಪ್ರತಿಭಟನಾ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ನಗರ ಸಭೆಯ ವಾರ್ಡ್ ನಂ.11,12,13 ಮತ್ತು 14ರ ಬಡಾವಣೆಯ ಕೊಳವೆ ಬಾವಿ ಕೆಟ್ಟು ಹೋಗಿವೆ, ಬೇಸಿಗೆ ಕಾಲವಾಗಿದರಿಂದ ಮೋಟರ್ ಮತ್ತು ಪೈಪ್ ಲೈನ್ ಅಳವಡಿಸಿ ತಕ್ಷಣವೆ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ವಾರ್ಡ ನಂ.14ರ ಭಾರತ ಲೇ-ಔಟ್’ನಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿ ಹೈಮಾಸ್ಟ್ ದೀಪ ಅಳವಡಿಸಿ. ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಮಾಡಬೇಕು, ಆಶ್ರಯ ಕಾಲೋನಿಯ ನಿಜವಾದ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಗರ ಸಭೆ ವ್ಯಾಪ್ತಿಯ ಉದ್ಯಾನವನ ಅತಿಕ್ರಮಣ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಉದ್ಯಾನವನ ಅಭಿವೃದ್ಧಿ ಪಡಿಸಬೇಕು ಎಂದರು.
ಜಿಲ್ಲಾ ಸಂ.ಸಂಚಾಲಕ ಸತೀಶ ಕೋಬಾಳಕರ ಮತ್ತು ಬಸವರಾಜ ಮಯೂರ ಮಾತನಾಡಿ, ಪೌರ ಕಾರ್ಮಿಕರ ವೇತನ ಪಾವತಿ ಮಾಡಬೇಕು, ನಗರದ ತುಂಬಾ ಪ್ಲಾಸ್ಟಿಕ್ ಮತ್ತು ಕಸದ ರಾಶಿ, ರಾಶಿ ಬಿದ್ದಿದೆ, ನೈರ್ಮಲ್ಯಿಕರಣದ ಜೊತೆಗೆ ನಾಯಿಗಳ ಹಾವಳಿ ತಡೆಯಬೇಕು, ಮಾಸ್ಟರ್ ಪ್ಲಾನ್ ನಿಂದ ತೆರೆವಾದ ಜಾಗ ಈಗ ಮತ್ತೆ ಅತಿಕ್ರಮಿಸುತ್ತಿದ್ದಾರೆ ಕಾನೂನು ಬಾಹಿರ ನಿಲುವು ತಡೆಯಬೇಕು ಹಾಗೂ ನಗರ ಸಭೆಯ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡಿರುವದು ತೆರೆಯುವಗೊಳಿಸಬೇಕು ಮತ್ತು ಕಾನೂನು ಬಾಹಿರವಾಗಿ ಸರ್ಕಾರದ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಮಾಡಿರುವ ಎಲ್ಲಾ ಕಟ್ಟಡಗಳನ್ನು ತೆರೆವುಗೊಳಿಸಬೇಕು ಎಂದರು.
ಸಾರ್ವಜನಿಕರ ಎಲ್ಲಾ ಬೇಡಿಕೆಗಳಿಗೆ ಸ್ಪಂದನೆ ಮಾಡಿ ತಕ್ಷಣವೇ ನ್ಯಾಯ ಒದಗಿಸಿಕೊಡಬೇಕು, ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಮತ್ತು ಬೇಡಿಕೆಗಳು ಈಡೆರಿಸದಿದ್ದರೆ ನಗರ ಸಭೆಗೆ ಮುತ್ತಿಗೆ ಹಾಕಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ತಹಸೀಲ್ದಾರ್ ನೀಲಪ್ರಭಾ ಬಬಲಾದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಶಿವಶಾಲ ಪಟ್ಟಣ, ಮರೇಪ್ಪ ಬಣಮಿ, ಮನೋಹರ ಕೊಳೂರ, ಹುಲಗೇಶ ನಾಟೇಕರ, ರಾಣೋಜಿ ಹಾದಿಮನಿ, ಪರಶುರಾಮ ಚಲವಾದಿ, ಕಾರ್ಮಿಕರ ಮುಖಂಡ ನಾಗಪ್ಪ ರಾಯಚೂರಕರ, ಅಂಗವಿಕಲರ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಗೋವರ್ಧನ ರಾಠೋಡ, ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಶೇಖ ಬಾಬು ಉಸ್ಮಾನ, ಶಹಾಬಾದ ಅಧ್ಯಕ್ಷ ಆಂಜನೇಯ ಕುಸಾಳೆ, ದಸಂಸ ಸಂ ಸಂಚಾಲಕ ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರಕರ ಮತ್ತು ಮೋಹನ ಹಳ್ಳಿ ಸೇರಿದಂತೆ ಅನೇಕರು ಇದ್ದರು.