ಜಾತಿ, ಮತಗಳ ಮೇಲೆ ಮೇಲು-ಕೀಳು ಸಲ್ಲದು

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಲಿಂಗ ಸೇರಿದಂತೆ ಮುಂತಾದ ಅಂಶಗಳ ಮೇಲೆ ಯಾವುದೆ ರೀತಿಯ ತಾರತಮ್ಯ ಮಾಡದೆ ಎಲ್ಲರು ಸರಿಸಮಾನರೆಂದು ಭಾವಿಸಬೇಕು. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ದೊಡ್ಡವನಾಗಲು ಸಾಧ್ಯವಿದೆ ಎಂದು ಸಮಾಜ ಸೇವಕ ಸಿದ್ದರಾಮ ತಳವಾರ ಹೇಳಿದರು.

ನಗರದ ಗಾಜಿಪೂರ ಬಡಾವಣೆಯ ಶ್ರೀನಿವಾಸ ಸಭಾಂಗಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ಯಲ್ಲಿ ಮಾತನಾಡಿದರು.

ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ದೇಶದ ಸಂವಿಧಾನ, ಕಾನೂನಿನ ಮುಂದೆ ಎಲ್ಲರು ಸರಿಸಮಾನರು. ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನವಾದ ಅವಕಾಶ ಒದಗಿಸಿಕೊಡುವ ಪರಿಕಲ್ಪನೆ ಸಾಮಾಜಿಕ ನ್ಯಾಯವಾಗಿದ್ದು, ಇದು ಸದೃಢ ರಾಷ್ಟ್ರ ನಿರ್ಮಾಣವಾಗಲು ಪೂರಕವಾಗಿದೆ ಎಂದರು.

ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆಯಂತಹ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಿ, ಸರ್ವರಿಗೂ ಸಮಾನ ಅವಕಾಶ, ಉದ್ಯೋಗ, ರೈತರ ಏಳ್ಗೆಯ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸುವುದು ಸಾಮಾಜಿಕ ನ್ಯಾಯದ ಉದ್ದೇಶವಾಗಿದೆ. ಇದು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಬುದ್ಧ-ಬಸವ-ಅಂಬೇಡ್ಕರ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ರವಿಕುಮಾರ ಸಿ.ವೀರಶೆಟ್ಟಿ, ಮಲ್ಲಿಕಾರ್ಜುನ ಎಸ್ ಕಿಣಗಿ, ಮಲ್ಲಿನಾಥ ಬೆಲ್ಲದ್, ಅನಿಲ್ ಬಿರಾದಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *