ಸುದ್ದಿ ಸಂಗ್ರಹ ಮುಂಬೈ
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅಭಿನಯದ ಸೂಪರ್ಹಿಟ್ ಚಿತ್ರ ಅಣ್ಣಯ್ಯ ಬಹುತೇಕರಿಗೆ ಗೊತ್ತೆಯಿದೆ. ಸಿನಿಮಾದಲ್ಲಿ ರವಿಚಂದ್ರನ್ ಪಾತ್ರಕ್ಕಿಂತ ಹೆಚ್ಚಾಗಿ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ನಟಿಯನ್ನೆ ಹಲವರು ಬಹುಬೇಗನೆ ನೆನಪಿಸಿಕೊಳ್ಳುತ್ತಾರೆ. ಕಾರಣ ಆ ಮಟ್ಟಿಗಿನ ಅಮೋಘ ಅಭಿನಯ. ನಾಗವೇಣಿ ಪಾತ್ರದಲ್ಲಿ ವಿಷಕಾರಿ ಹೆಣ್ಣಾಗಿ ನಟಿಸುವ ಮೂಲಕ ಇಂದಿಗೂ ಕನ್ನಡ ಸಿನಿಪ್ರಿಯರ ನೆನಪಿನಲ್ಲಿ ಉಳಿದಿರುವ ಬಾಲಿವುಡ್ನ ಹಿರಿಯ ನಟಿ ಅರುಣಾ ಇರಾನಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೆಲವು ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ.
ಜೂಮ್ ಜತೆಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಅರುಣಾ, ಬಾಲಿವುಡ್ಗೆ ಕಾಲಿಟ್ಟ ಆರಂಭದ ದಿನಗಳು ಮತ್ತು ನಟನೊಂದಿಗೆ ಆದ ಪ್ರೇಮ ಹಾಗೂ ಆತನಿಂದ ತನಗಾದ ನೋವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ತೆರೆ ಮೇಲೆ ತನ್ನೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ಸಹ ನಟ ಮೆಹಮ್ಮೂದ್, ತನ್ನ ಸಿನಿ ಕರಿಯರ್ನಲ್ಲಿ ಅವಕಾಶಗಳೆ ಸಿಗದಂತೆ ಮಾಡಿಬಿಟ್ಟ ಎಂದು ಹೇಳಿದ್ದಾರೆ.
ಅವಕಾಶಗಳೆ ಸಿಗಲಿಲ್ಲ
ಚಿತ್ರರಂಗದಲ್ಲಿ ಹೊಸಬರಾಗಿ ಬಂದಾಗ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆಗ ಹಾಸ್ಯ ನಟ ಮೆಹಮ್ಮೂದ್ ಅವರು ನನ್ನೊಂದಿಗೆ ಒಳ್ಳೆಯ ಸ್ನೇಹ ಬೆಳೆಸಿಕೊಂಡರು. ನನಗೆ ಮೊದಲು ಕೆಲಸ ಕೊಟ್ಟಿದ್ದೆ ಅವರು. ಇಬ್ಬರು ನಮ್ಮ ಪ್ರಾಜೆಕ್ಟ್ಗಳಲ್ಲಿ ಬಿಜಿಯಾದೆವು. ನಮ್ಮಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂಬ ಸುದ್ದಿಗಳು ಹರಿದಾಡಿದವು. ನಾವಿಬ್ಬರು ವಿವಿಧ ಕೆಲಸಗಳಲ್ಲಿ ತೊಡಗುತ್ತಿದ್ದಂತೆ ಹಾದಿಯೂ ಬದಲಾಯಿತು. ಅಲ್ಲಿಂದ ನನಗೆ ಅನಿಸಿದ್ದು, ಆತ ನನ್ನನ್ನು ಬಹಿರಂಗವಾಗಿ ಶೋಷಣೆಗೆ ಒಳಪಡಿಸಿದ್ದಾರೆ ಅಂತ. ನನಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಗದಂತಾಯಿತು ಎಂದಿದ್ದಾರೆ.
ಮದುವೆ ಆಗ್ತಿನಿ ಅಂದ್ರು, ಆಮೇಲೆ…
ಒಂದು ಸಮಯದಲ್ಲಿ, ನನಗೆ ಮೆಹಮ್ಮೂದ್ ಜೊತೆ ಮದುವೆ ಆಗೋಗಿದೆ ಎಂಬ ಊಹಾಪೋಹಗಳು ಇಡಿ ಚಿತ್ರರಂಗದಲ್ಲಿ ಹರಿದಾಡಲು ಶುರುವಾಯಿತು. ನಮ್ಮಿಬ್ಬರ ನಡುವೆ ಪ್ರೀತಿ ಇತ್ತು. ಮೆಹಮೂದ್ ಸಹ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದರು. ಆದರೆ ಅವರು ಆ ನಂತರ ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ. ಎಲ್ಲರ ಬಳಿಯೂ ನಮ್ಮಿಬರಿಗೆ ಅದಾಗಲೆ ವಿವಾಹವಾಗಿದೆ ಎಂದು ಹೇಳಿಕೊಂಡು ಬಂದಿದ್ದರು. ಇದು ನನ್ನ ಮೇಲೆ ಮಾತ್ರವಲ್ಲ, ನನ್ನ ಸಿನಿ ಕರಿಯರ್ ಮೇಲೂ ತೀವ್ರ ಪರಿಣಾಮ ಬೀರಿತು ಎಂದರು.
ನಮ್ಮಿಬ್ಬರ ಮದುವೆಯಾಗಿದೆ ಎಂದೆ ಭಾವಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು, ನಾನೇನಾದರೂ ಗರ್ಭಿಣಿಯಾದರೆ ಅವಕಾಶ ಹೇಗೆ ಕೊಡುವುದು ಎಂದು ಯೋಚಿಸಿ, ನನ್ನನ್ನು ಮುಂದಿನ ಪ್ರಾಜೆಕ್ಟ್ಗಳಿಂದ ಕೈಬಿಡಲು ಶುರುಮಾಡಿದರು. ಇದರಿಂದ ನನಗೆ ಅವಕಾಶಗಳು ಕೈತಪ್ಪಿತು. ಇಲ್ಲಿ ನಾನು ಮೆಹಮ್ಮೂದ್ ಅವರದ್ದು ಮಾತ್ರ ತಪ್ಪು ಎಂದು ಹೇಳುವುದಿಲ್ಲ. ಕಾರಣ ಈ ತಪ್ಪಿನಲ್ಲಿ ನನ್ನ ಪಾತ್ರವೂ ಇದೆ. ಏಕೆಂದರೆ, ಅವರೊಂದಿಗೆ ಪ್ರೀತಿಯಲ್ಲಿ ಇದ್ದ ಮೇಲೆ, ನನ್ನದು ಅಲ್ಲಿ ಒಂದು ಪಾತ್ರವಿತ್ತು. ಪುಣ್ಯ ಆತನೊಂದಿಗೆ ನಾನು ಮದುವೆಯಾಗಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್).