ಸುದ್ದಿ ಸಂಗ್ರಹ ಬೆಂಗಳೂರು
ಹೆತ್ತ ಮಕ್ಕಳನ್ನು ಸಾಕಲು ತಂದೆ-ತಾಯಿ ಕಷ್ಟ ಪಟ್ಟು ದುಡಿಯುತ್ತಾರೆ. ತಮಗೆಷ್ಟೆ ತೊಂದರೆಗಳಿದ್ದರೂ ಮಕ್ಕಳ ಮುಖ ನೋಡಿಕೊಂಡು ನೋವು ನುಂಗಿಕೊಂಡಿರುತ್ತಾರೆ. ಆದರೆ ಇಲ್ಲೊರ್ವ ಪಾಪಿ ತಂದೆ, ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗನಿಗೆ ವಿಷ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ.
ವಿಶೇಷಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ಈ ಕುಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.
ಮಗುವಿನ ಸ್ಥಿತಿ ಗಂಭೀರ
ಬಾಗಲೂರು ನಿವಾಸಿಗಳಾದ ಸತ್ಯ ಮತ್ತು ಮುನಿಕೃಷ್ಣ ದಂಪತಿಯ ಮಗ ಜೋಯಲ್ ಹುಟ್ಟಿನಿಂದಲೇ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ವಿಶೇಷಚೇತನತೆಯಿಂದ ಬಳಲುತ್ತಿದ್ದ. ಮಗುವಿನ ನಿರಂತರ ಚಿಕಿತ್ಸೆ, ಆಸ್ಪತ್ರೆಗಳ ಓಡಾಟ ಮತ್ತು ಹೆಚ್ಚುತ್ತಿರುವ ಖರ್ಚಿನಿಂದ ಮಾನಸಿಕವಾಗಿ ಕುಗ್ಗಿದ್ದ ತಂದೆ ಮುನಿಕೃಷ್ಣ ಈ ಕೃತ್ಯ ಎಸಗಿದ್ದಾನೆ.
ಡಿಸೆಂಬರ್ 22ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಮಗು ಬಾಯಲ್ಲಿ ನೊರೆ ಕಂಡು ತಾಯಿ ಹಾಗೂ ಅಜ್ಜಿ ಗಾಬರಿ ಆಗಿದ್ದಾರೆ. ಕೂಡಲೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಮಗು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ. ಘಟನೆ ಬಗ್ಗೆ ಪತ್ನಿ ಸತ್ಯ ನೀಡಿರುವ ದೂರಿನ ಅನ್ವಯ ಮುನಿಕೃಷ್ಣ ವಿರುದ್ಧ ದೂರು ದಾಖಲಾಗಿದೆ.
ಮಗನಿಗೆ ಕೀಟನಾಶಕ ಕುಡಿಸಿದ್ದು ಒಪ್ಪಿಕೊಂಡ ತಂದೆ
ಅಮಾನವೀಯ ಕೃತ್ಯದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿರುವ ತಂದೆ ಮುನಿಕೃಷ್ಣ, ವಿಶೇಷಚೇತನನಾದ ನನ್ನ ಮಗನ ಚಿಕಿತ್ಸೆಗೆ ಹಣವಿಲ್ಲ. ನನಗೆ ಯಾರು ಸಪೋರ್ಟ್ ಮಾಡಿಲ್ಲ. ಇದಲ್ಲದೆ ವೈದ್ಯರು ಕೈಚೆಲ್ಲಿದ್ದರು. ನಾನು ಕೆಲಸಕ್ಕೆ ಹೋಗುವ ಕಡೆ ಗಿಡಗಳಿಗೆ ಔಷಧ ಹೊಡೆಯುತ್ತಿದ್ದರು. ಅವರ ಬಳಿ 50 ಮಿ.ಲಿ ಕಿಟನಾಶಕ ತಂದು ಮಗನ ಆಹಾರಕ್ಕೆ ಹಾಕಿದ್ದೆ. ಆತನ ಚಿಕಿತ್ಸೆಗೆ ಸಾಕಷ್ಟು ಸಾಲ ಮಾಡಿದ್ದೆನೆ. ಹೀಗಾಗಿ ವಿಷ ಹಾಕಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.