ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟ ಮಾಡುತ್ತಿರುವ ಎಐಡಿಎಸ್ಒ ಸಂಘಟನೆ: ತುಳುಜರಾಮ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ದೇಶಾದ್ಯಂತ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಬಲಿಷ್ಠವಾದ ಚಳುವಳಿ ಕಟ್ಟುತ್ತಾ ಬರುತ್ತಿದೆ. ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಸಾರ್ವತ್ರಿಕ ಶಿಕ್ಷಣ ನಮ್ಮದಾಗಬೇಕು ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ಎಐಡಿಎಸ್ಒ ಕರ್ನಾಟಕದಲ್ಲೂ ಬಹಳ ಸಕ್ರಿಯವಾಗಿ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿ ಬೆಳೆಸುತ್ತಿದೆ ಎಂದು ಎಐಡಿಎಸ್ಒ ಜಿಲ್ಲಾಧ್ಯಕ್ಷ ತುಳುಜರಾಮ ಹೇಳಿದರು.

ನಗರದ ಹುನಮಾನ ನಗರದಲ್ಲಿ ಸ್ಥಳೀಯ ಸಮಿತಿ ವತಿಯಿಂದ ಎಐಡಿಎಸ್ಒ 72ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೋದಯದ ಮಹಾನ್ ಚೇತನಗಳಾದ ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸೇರಿದಂತೆ ಅನೇಕ ಚೇತನರ ಮೂಲ ಆಶಯವಾದ ಸಾರ್ವಜನಿಕ ಶಿಕ್ಷಣ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ವ್ಯಾಪಾರಕ್ಕಿಟ್ಟಿದೆ. ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ಶಿಕ್ಷಣ ಖಾಸಗಿಯವರ ಮಡಿಲಿಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಶಾಶ್ವತವಾಗಿ ಬಡ ಮಕ್ಕಳ ಜ್ಞಾನದ ಬಾಗಿಲನ್ನು ಮುಚ್ಚಿ, ಶಿಕ್ಷಣ ವಂಚಿತರನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ದೇಶದ ನವೋದಯ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕ್ರಾಂತಿಕಾರಿಗಳ ಹೋರಾಟ ಮತ್ತು ಸಂಘರ್ಷಗಳ ಫಲವಾಗಿ ನಮಗೆ ದೊರೆತ ಶಿಕ್ಷಣ ಹಕ್ಕು ಕಸಿದು, ಅವರೆಲ್ಲರ ಆಶಯಗಳನ್ನು ಗಾಳಿಗೆ ತೂರಿ ಶಿಕ್ಷಣ ಕೆಲವೇ ಜನರ ಸೊತ್ತಾಗಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದರು.

ಆಳುವ ಸರ್ಕಾರದ ಜನವಿರೋಧಿ ನೀತಿಗಳಿಂದ ಶಿಕ್ಷಣ ಉಳಿಸಬೇಕಾದ ಸಂದರ್ಭ ಬಂದೊದಗಿದೆ. ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣ ಉಳಿಸಲು ಮುಂಬರಬೇಕು ಎಂದರು.

ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಸದಸ್ಯರಾದ ಸ್ಪೂರ್ತಿ ಗುರುಜಲಕರ, ಬಾಬು ಪವಾರ್, ದೇವರಾಜ, ಅಜಯ್ ಗುರುಜಲಕರ, ಸೃಷ್ಟಿ, ಬೃಂದಾ, ಬಿಂದು ಸೇರಿದಂತೆ ವಿದ್ಯಾರ್ಥಿಗಳಾದ ಅಂಬಿಕಾ, ಪ್ರಜ್ವಲ್, ಪ್ರಶಾಂತ್ ಮತ್ತು ಭೀಮಾಶಂಕರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *