ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ

ಗ್ರಾಮೀಣ

ಸುದ್ದಿ ಸಂಗ್ರಹ ಚಿತ್ತಾಪುರ
ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಜಿಲ್ಲಾ ಪೊಲೀಸ್, ಶಹಾಬಾದ ಉಪವಿಭಾಗ ಮತ್ತು ವಾಡಿ. ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೆ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವದು ದುರಂತ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದ ಲಿಂಕ್’ಗಳನ್ನು ತೆರೆಯುವುದು, ಆನ್’ಲೈನ್ ಗೇಮ್’ಗಳು ಆಡುವುದು, ಪೋಸ್ಕೊ ಪ್ರಕರಣ ಸೇರಿದಂತೆ ಅನೇಕ ಚಟುವಟಿಕೆಗಳು ಮಕ್ಕಳನ್ನು ಶೋಷಣೆ ಮಾಡುತ್ತಿವೆ. ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು ಸೇರಿದಂತೆ ಮುಂತಾದ ಸಾಮಾಜಿಕ ಸಮಸ್ಯೆ ನಿಯಂತ್ರಿಸಲು ಜನರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಬೇಕು. ಮೊಬೈಲ್ ಬಳಕೆಯನ್ನು ವಿದ್ಯಾರ್ಥಿ ಜೀವನದಲ್ಲಿ ಬಳಸದೆ ಇರುವುದು ಉತ್ತಮ ಎಂದರು.

ವಾಡಿ ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಶಿಕ್ಷಕರಿಂದ, ಸಹಪಾಠಿಗಳಿಂದ ಅಸಹಜ ಪ್ರತಿಕ್ರಿಯೆ ಬಂದಾಗ ನಮ್ಮನ್ನು ಸಂಪರ್ಕಿಸಿ, ಯಾರೊಂದಿಗೂ ಅತಿ ಸಲುಗೆಯಿಂದ ವರ್ತಿಸಬೇಡಿ ಎಂದರು.

ವಾಡಿ ಪಿಎಸ್ಐ ತಿರುಮಲೇಶ್ ಕುಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ನಡೆಯುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಂದರಲ್ಲೂ ಜಾಗರುಕರಾಗಿ ಇರಬೇಕು. 112 ಇದು ಪೊಲೀಸ್ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ. ನಿಮಗೆ ತೊಂದರೆಯಾದಾಗ ಇವುಗಳ ಸಹಾಯ ಪಡೆಯಿರಿ ಎಂದರು.‌‌

ಕಾರ್ಯಕ್ರಮದ ಆರಂಭದಲ್ಲಿ ಎತ್ತಿನ ಬಂಡಿಗಳಿಗೆ ರೆಡಿಯಂ ಹಚ್ಚುವ ಮೂಲಕ ಅಪಘಾತದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಯಿತು. ನಂತರ ಮನೆ ಮನೆಗೆ ಪೊಲೀಸ್ ಎನ್ನುವ ಕಾರ್ಯಕ್ರಮ ಮಾಡಲಾಯಿತು.

ವೇದಿಕೆ ಮೇಲೆ ಸಂಸ್ಥೆಯ ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೆದ್, ಅಣ್ಣಾರಾವ ಬಾಳಿ, ಈಶ್ವರಪ್ಪ ಬಾಳಿ ವೇದಿಕೆ ಮೇಲಿದ್ದರು.‌

ಕಾರ್ಯಕ್ರಮದಲ್ಲಿ ಎಎಸ್ಐ ಗುಂಡಪ್ಪ ಕೊಗನೂರ್, ಗಣ್ಯರಾದ ಗುರುನಾಥ ಗುದಗಲ್, ಶರಣು ಜ್ಯೋತಿ, ಬಂದಗಿಸಾಬ್, ಗುರು ಗುತ್ತೇದಾರ್, ಪೇದೆಗಳಾದ ಲಕ್ಷ್ಮಣ್, ರಸೂಲ್ ಖಾನ್, ಆರಿಫ್, ಜ್ಯೋತಿ ಮತ್ತು ಮಾಲನಬಿ ಇದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವoದಿಸಿದರು.

Leave a Reply

Your email address will not be published. Required fields are marked *