ಸುದ್ದಿ ಸಂಗ್ರಹ ಕಲಬುರಗಿ
ಎಳ್ಳು ಅಮವಾಸ್ಯೆ ಹಬ್ಬವು ರೈತರ ಹಬ್ಬವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾದ ಜೋಳ, ಭೂ ತಾಯಿಗೆ ಗೌರವ ಸಲ್ಲಿಸುವುದಾಗಿದೆ. ಎಲ್ಲಾ ಪೋಷಕಾಂಶಗಳುಳ್ಳ ಆಹಾರವನ್ನು ಪರಸ್ಪರ ಎಲ್ಲರೊಂದಿಗೆ ಸಹಭೋಜನ ಮಾಡುವ ಆಹಾರ ಸಂಸ್ಕೃತಿಯ ಪ್ರತೀಕ ಇದಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಹೇಳಿದರು.
ಸೇಡಂ ತಾಲೂಕಿನ ಕಾಚೂರ ಗ್ರಾಮದ ಪ್ರಗತಿಪರ ರೈತ ಶಿವಮೂರ್ತಿಯವರ ಹೊಲದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಎಳ್ಳು ಅಮಾವಾಸ್ಯೆ ಹಾಗೂ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಮತ್ತು ಪ್ರಗತಿಪರ ರೈತರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪ ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿ, ಬನ್ನಿ ಮರಕ್ಕೆ ಪೂಜೆ ಮಾಡಿ, ಎಳ್ಳು-ಬೆಲ್ಲ ಚಲ್ಲುವ ಮೂಲಕ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ದೊಡ್ಡ ಬುತ್ತಿ ಕಟ್ಟಿಕೊಂಡು ಕುಟುಂಬ ಸಮೇತ ಹೊಲಕ್ಕೆ ಹೋಗಿ ಊಟ ಮಾಡುವುದು, ಬಂಧು-ಮಿತ್ರರನ್ನು ಆಹ್ವಾನಿಸುವುದು ಈ ಹಬ್ಬದ ವಿಶೇಷವಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ, ಒಕ್ಕಲಿಗ ಮುದ್ದಣ್ಣ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಕೃಷಿ ಕಾಯಕದ ಮಹತ್ವ ಸಾರಿದ್ದಾರೆ. ‘ಕಾಮಭೀಮ ಜಿವದೊಡೆಯ’ ಎಂಬ ಅಂಕಿತ ನಾಮದೊಂದಿಗೆ ರಚನೆಯಾದ 12 ವಚನಗಳು ದೊರೆತಿವೆ. ಅದರಲ್ಲಿ ಭಕ್ತಿ, ಕಾಯಕ, ಕೃಷಿ ಕಾಯಕ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ ಎಂದರು.
ಪ್ರಗತಿಪರ ರೈತರಾದ ಬಸವತೀರ್ಥಪ್ಪ ಹೂಗಾರ, ಹಣಮಂತರಾವ ಹೊಸಳ್ಳಿ ಮತ್ತು ಶಿವಶರಣಪ್ಪ ಸಾಹು ತಾಡಪಳ್ಳಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿವಮೂರ್ತಿ ಹೂಗಾರ, ಸುರೇಶ ಪಾಟೀಲ್, ನಾಗರಾಜ ಮಾಲಿ ಪಾಟೀಲ್, ನಾಗರಾಜ ಎಸ್.ಪಾಟೀಲ್, ಗಂಗಮ್ಮ ಎಸ್.ಹೂಗಾರ, ಶೋಭಾ ಸಿ.ಮಂಗಲಗಿ, ಪಲ್ಲವಿ ಎಸ್.ಪಾಟೀಲ್, ಗುಂಡಮ್ಮ ಹೂಗಾರ, ಬಸವಪ್ರಸಾದ, ಬಸವಪ್ರಸನ ಸೇರಿದಂತೆ ಅನೇಕರು ಇದ್ದರು.