ಸುದ್ದಿ ಸಂಗ್ರಹ ಕಲಬುರಗಿ
ಯಾವುದೆ ಒಬ್ಬ ವ್ಯಕ್ತಿಯು ಬದುಕಿ, ಬಾಳಬೇಕಾದರೆ ಆತನಿಗೆ ಜೀವಿಸುವ ಸ್ವಾತಂತ್ರ್ಯ, ಅಭಿವ್ಯಕ್ತಿ ಶಿಕ್ಷಣ, ರಕ್ಷಣೆ, ಸಮಾನತೆಯಂತಹ ಮಾನವ ಹಕ್ಕುಗಳು ದೊರೆಯಬೇಕು. ವ್ಯಕ್ತಿಗಳಲ್ಲಿ ಮಾನವೀಯತೆ ಉಳಿದು, ಬೆಳೆಯಲು ಮತ್ತು ವ್ಯಕ್ತಿಯು ಬೆಳವಣಿಗೆಯಾಗಬೇಕಾದರೆ ಮಾನವ ಹಕ್ಕುಗಳು ಅವಶ್ಯಕ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಮಾತನಾಡಿದ ಅವರು, ಮಾನವ ಹಕ್ಕುಗಳು ಮನುಷ್ಯನ ಘನತೆ, ಸ್ತ್ರೀಯರ ಸಮಾನತೆಯ ಸ್ವಾತಂತ್ರ್ಯ, ಮಕ್ಕಳಿಗೆ ಶಿಕ್ಷಣದ ಹಕ್ಕುಗಳನ್ನು ಒದಗಿಸಿವೆ. ಇವುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿಶ್ವಸಂಸ್ಥೆಯು 10 ಡಿಸೆಂಬರ1948 ರಂದು 30 ಅಂಶಗಳನ್ನೊಳಗೊಂಡ ಹಕ್ಕುಗಳನ್ನು ಘೋಷಿಸಿತು. ಎಲ್ಲಾ ಅಂಶಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ 1993ರಲ್ಲಿ ‘ಮಾನವ ಹಕ್ಕುಗಳ ಆಯೋಗ’ವನ್ನು ರಚಿಸಲಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಾಗೂ ಉಲ್ಲಂಘನೆಯಾದರೆ ಅದಕ್ಕೆ ನ್ಯಾಯಯುತ ಪರಿಹಾರ ನೀಡುವ ಕಾರ್ಯ ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಚಿಂತಕ ಡಾ.ರಾಜಶೇಖರ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಬಸವರಾಜ ದೇಗಾಂವ, ರವೀಂದ್ರ ಪೂಜಾರಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.