ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಪಟ್ಟಣ

ಸುದ್ದಿ ಸಂಗ್ರಹ ಚಿತ್ತಾಪುರ 
ಯಡ್ರಾಮಿ ತಾಲೂಕಿನ ಪತ್ರಕರ್ತ ಪ್ರಶಾಂತ್‌ ಚವ್ಹಾಣ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದ ಪ್ರಕರಣ ಅತ್ಯಂತ ಖಂಡನೀಯ ಈ ಕೂಡಲೇ ಕಿಡಿಗೇಡಿಗಳಿಗೆ ಬಂಧಿಸಿ ರಾಜ್ಯ ಸರ್ಕಾರ ನಿದರ್ಶನೀಯ ಶಿಕ್ಷೆ ವಿಧಿಸಬೇಕು‌‌ ಮತ್ತು ಗ್ರಾಮೀಣ ಪತ್ರಕರ್ತರ ರಕ್ಷಣೆಗೆ ವಿಶೇಷ ಕಾನೂನು ಜಾರಿಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ತಾಪುರ ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನತಾಂತ್ರಿಕ ಬೇಡಿಕೆಗಳ ಮೇಲೆ ಬೆಳಕು ಚೆಲ್ಲುತ್ತಾ ಅಸಹಾಯಕರ, ನೊಂದವರ ಮತ್ತು ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ನಿಂದನೆ ಮಾಡುವುದು ಮತ್ತು ದೈಹಿಕ ಹಲ್ಲೆ ನಡೆಸುವುದು ಇತ್ತಿಚೆಗೆ ತೀರಾ ಮಾಮೂಲು ಎನ್ನುವಂತಾಗಿದೆ. ಸಾಮಾಜಿಕ ಕಳಕಳಿಯ ಪತ್ರಕರ್ತರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದ್ದು, ಉಸಿರುಗಟ್ಟುವ ವಾತಾವರಣಕ್ಕೆ ಸೆಡ್ಡು ಹೊಡೆದು ಕೆಲವೊಮ್ಮೆ ಕೆಲಸ ಮಾಡುವ ಸ್ಥಿತಿ ಉಂಟಾಗುತ್ತದೆ. ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಈಚೆಗೆ ಪತ್ರಕರ್ತರ ಮೇಲೆ ಕ್ಷುಲ್ಲಕ ಕಾರಣಕ್ಕೆ ದಾಳಿ ನಡೆಸುವುದು ಮತ್ತು ಬೆದರಿಕೆ ಹಾಕುವುದು ಕಂಡುಬರುತ್ತಿದ್ದು, ಯಡ್ರಾಮಿ ಪ್ರಕರಣ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಸರ್ಕಾರ ಇಂತಹ ಹಲ್ಲೆಕೋರರ ವಿರುದ್ದ ಕಠಿಣ ಕ್ರಮ ಜರುಗಿಸದಿರುವುದು ಸಂವಿಧಾನವನ್ನು ಅಣಕಿಸುವಂತಿದೆ ಎಂದರು.

ಈ ಕೂಡಲೇ ಯಡ್ರಾಮಿ ಪತ್ರಕರ್ತನ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಗ್ರಾಮೀಣ ಪತ್ರಕರ್ತರ ರಕ್ಷಣೆಗೆ ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ ವಹಿಸಿದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *