ಕಲಬುರಗಿ: ದೇಶದ ರಕ್ಷಾ ಕವಚವಾದ ಸಂವಿಧಾನದ ಆಶಯಗಳು, ತತ್ವಗಳನ್ನು ಅನುಷ್ಠಾನ ಮತ್ತು ಪಾಲನೆ ಮಾಡುವುದರಲ್ಲಿ ವಕೀಲ್‌ರ ಪಾತ್ರ ಅನನ್ಯ ಎಂದು ಹಿರಿಯ ವಕೀಲ್ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢ ಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಏರ್ಪಡಿಸಿದ್ದ ‘ರಾಷ್ಟ್ರೀಯ ವಕೀಲರ ಮತ್ತು ವಿಶ್ವ ವಿಶೇಷ ಚೇತನರ ದಿನಾಚರಣೆ’ಯಲ್ಲಿ ಗೌರವ ಸ್ವೀಕರಿಸಿ, ಮಾತನಾಡಿದ ಅವರು, ದೇಶದಲ್ಲಿನ ಎಂತಹ ದೊಡ್ಡ ವ್ಯಕ್ತಿಯಾಗಿದ್ದು, ಆ ವ್ಯಕ್ತಿ ತಪ್ಪು ಮಾಡಿದರೆ ಕಾನೂನಿನಡಿ ಶಿಕ್ಷೆ, ಯಾವುದೆ ವ್ಯಕ್ತಿಗೆ ಅನ್ಯಾಯವಾಗಿದ್ದರೆ ನ್ಯಾಯ ಒದಗಿಸಿಕೊಡುವಲ್ಲಿ ನ್ಯಾಯವಾದಿಗಳು ಅನನ್ಯವಾದ ಕೊಡುಗೆ ನೀಡುವ ಮೂಲಕ, ದೇಶದ ಸಂವಿಧಾನ, ಕಾನೂನು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮತ್ತು ಸಫಲತೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಸಮಾಜದಲ್ಲಿರುವ ಅಶಕ್ತ ವರ್ಗದವರಿಗೆ ಉಚಿತ ಕಾನೂನು ದೊರೆಯಬೇಕೆಂಬ ಉದ್ದೇಶದಿಂದ ಲಭ್ಯವಿರುವ ಕಾಯ್ದೆ-ಕಾನೂನಗಳ ಬಗ್ಗೆ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಡಾ.ಬಾಬು ರಾಜೇಂದ್ರ ಪ್ರಸಾದ್‌ರ ಜನ್ಮದಿನವನ್ನು ‘ರಾಷ್ಟ್ರೀಯ ವಕೀಲರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಅವರು ಶ್ರೇಷ್ಠ ನ್ಯಾಯವಾದಿಗಳಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಮತ್ತು ದೇಶದ ರಾಷ್ಟ್ರಪತಿಯಾಗಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ವಿಶೇಷಚೇತನ ಸಾಧಕ, ಸಮಾಜ ಸೇವಕ ಶ್ರೀಕಾಂತ ಬಿರಾದಾರ, ಈ ದಿನ ವಿಶ್ವದ ಎಲ್ಲಾ ವಿಶೇಷಚೇತನರ ಸಾಮೂಹಿಕ ಹುಟ್ಟು ಹಬ್ಬವಿದ್ದಂತೆ. ಅವರ ಬಗ್ಗೆ ಚಿಂತನ-ಮಂಥನ ಮಾಡುವುದು, ಸಾಧನೆಗಳ ಬಗ್ಗೆ ಪ್ರಚುರಪಡಿಸುವುದು, ಸಮಸ್ಯೆಗಳಿಗೆ ಪರಿಹಾರದ ಬಗೆಯನ್ನು ಅವಲೋಕಿಸುವುದು ದಿನದ ಉದ್ದೇಶವಾಗಿದೆ. ವಿಶೇಷಚೇತನರ ಬಗ್ಗೆ ಅನುಕಂಪ ಪಟ್ಟರೆ ಸಾಲದೆ. ಜೊತೆಗೆ ಅವರಿಗೆ ದೊರೆಯುವ ಎಲ್ಲಾ ಸೌಲಭ್ಯಗಳು ಸೂಕ್ತ ರೀತಿಯಿಂದ ದೊರೆಯಬೇಕು. ವಿಶೇಷಚೇತನರು ಉನ್ನತವಾದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ವಿಶೇಷಚೇತನರ ಬಗ್ಗೆ ತಮ್ಮ ಸ್ವರಚಿತ ಕವನವನ್ನು ವಾಚಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ವಿದ್ಯಾರ್ಥಿ ಪ್ರತಿನಿಧಿ ಆದಿತ್ಯ ಸಿ.ಗಾರಂಪಳ್ಳಿ ವೇದಿಕೆ ಮೇಲಿದ್ದರು. ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.