ಕುಂದಾನಗರಿಯಲ್ಲಿ ಕುಳಿತು ಅಮೇರಿಕಾದ ನಾಗರಿಕರನ್ನ ವಂಚಿಸುತ್ತಿದ್ದ ಗ್ಯಾಂಗ್‌: 33 ಸೈಬರ್‌ ವಂಚಕರು ಅರೆಸ್ಟ್‌

ಜಿಲ್ಲೆ

ಬೆಳಗಾವಿ: ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ ವಹಿವಾಟು ಹೆಚ್ಚಾಗುತ್ತಲೆ ಇದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ವಂಚಕರು ನೇರವಾಗಿ ಬ್ಯಾಂಕ್‌ ಖಾತೆಗೆ ಕನ್ನ ಇಡಲು ಶುರು ಮಾಡಿದ್ದಾರೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಎಲ್ಲೆ ಸೈಬರ್‌ ವಂಚನೆ ನಡೆದರೂ, ಅದರ ಹಿಂದೆ ವಿದೇಶಿಗರ ಲಿಂಕ್‌ ಇರುತ್ತಿತ್ತು. ಆದರೆ ಈಗ ಕುಂದಾನಗರಿಯಲ್ಲಿ ನಡೆದಿರೋದೆ ಬೇರೆ. ಬೆಳಗಾವಿಯಲ್ಲಿ ಕುಳಿತು ವಿಶ್ವದ ದೊಡ್ಡಣ್ಣ ಎನ್ನುವ ಅಮೇರಿಕಾದ ನಾಯಕರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ಕಾಲ್ ಸೆಂಟರ್ ಹೆಸರಿನಲ್ಲಿ ಅನುಮತಿ ಪಡೆದು ವಂಚಿಸುತ್ತಿದ್ದ ಸೈಬರ್‌ ವಂಚಕರನ್ನ ಬೆಳಗಾವಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ಮೂರು ದಿನಗಳ ತಪಾಸಣೆ ಬಳಿಕ ವಂಚನೆ ಜಾಲ ಬೆಳಕಿಗೆ ಬಂದಿದೆ. ವಂಚಕರ ಬಗ್ಗೆ ತಿಳಿದು ಪೊಲೀಸರೆ ದಂಗಾಗಿದ್ದಾರೆ.

ಪೊಲೀಸರ ತಪಾಸಣೆ ಬಳಿಕ ಉತ್ತರ ಭಾರತ ಮೂಲದ 33 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್ ಟಾಪ್, 37 ಮೊಬೈಲ್‌ಗಳ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬೆಳಗಾವಿಯ ಅಜಮ್ ನಗರದ ಕುಮಾರ್ ಹಾಲ್‌ನಲ್ಲಿ ಬಾಡಿಗೆ ಮನೆ ಪಡೆದು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಕಾಲ್‌ ಸೆಂಟರ್‌ ಹೆಸರಿನಲ್ಲಿ ದಂಧೆ ಶುರು ಮಾಡಿದ್ದರು. ಪ್ರತಿದಿನ ನೂರಾರು ಜನರಿಗೆ ಕರೆ ಮಾಡಿ ಯಾಮಾರಿಸುತ್ತಿದ್ದರು. ಬಳಿಕ ಅಮೇರಿಕಾದ ಹಿರಿಯ ನಾಗರಿಕರನ್ನ ಟಾರ್ಗೆಟ್‌ ಮಾಡಿದ್ದರು. ಡಾರ್ಕ್‌ ವೆಬ್‌ನಲ್ಲಿ ನಂಬರ್‌ ತೆಗೆದು ಕರೆ ಮಾಡುತ್ತಿದ್ದರು. ನಿಮ್ಮ ಹೆಸರಿನಲ್ಲಿ ಪಾರ್ಸಲ್‌ ಬಂದಿದೆ ಎಂದು ಹೇಳುತ್ತಿದ್ದರು. ಪಾರ್ಸೆಲ್‌ ಬಂದಿಲ್ಲ ಅಂತ ಗ್ರಾಹಕರು ಪ್ರತಿಕ್ರಿಯಿಸಿದ್ರೆ, ಅದನ್ನ ಕ್ಯಾನ್ಸಲ್‌ ಮಾಡಿ ಅಂತ ಬೇರೆ ನಂಬರ್‌ ಕೊಡ್ತಿದ್ದರು. ಆ ನಂಬರ್‌ಗೆ ಕರೆ ಮಾಡಿದಾಗ ಯಾಮಾರಿಸಿ ಹಣ ಎಗರಿಸುತ್ತಿದ್ದರು. ʻಫೆಡರಲ್ ಟ್ರೆಡ್ ಕಮಿಷನರ್ʼ ಅಂತಾ ಹೆಸರು ಹೇಳಿ ವಂಚನೆ ಮಾಡುತ್ತಿದ್ದರು. ಇದೆ ರೀತಿ ಒಬ್ಬೊಬ್ಬರಿಗೆ ಒಂದೊಂದು ಕಥೆ ಹೇಳಿ ವಂಚಿಸುತ್ತಿದ್ದರು.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಸೈಬರ್ ಪೊಲೀಸರು ಒಟ್ಟು 33 ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *