ಕಲಬುರಗಿ: ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವುದು, ಸಮಾನತೆ ಆಧಾರದ ಮೇಲೆ ವಿಶ್ವದಲ್ಲಿನ ರಾಷ್ಟ್ರಗಳ ಸ್ನೇಹ ಸಂಬಂಧ ಬೆಳೆಸುವುದು, ಅಂತಾರಾಷ್ಟ್ರೀಯ ಸಹಾಯಕ್ಕೆ ಬೆಂಬಲ ನೀಡಿ ವಿಶ್ವದಲ್ಲಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮತ್ತು ಮಾನವನ ಮೂಲಭೂತ ಹಕ್ಕುಗಳನ್ನು ಉತ್ತೇಜಿಸುವಂತಹ ಮುಂತಾದ ಕಾರ್ಯಗಳನ್ನು ಮಾಡುವ ಮೂಲಕ ವಿಶ್ವಸಂಸ್ಥೆ ವಿಶ್ವದ ಸಮಗ್ರ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆ ನೀಡುತ್ತಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವಸಂಸ್ಥೆಯ 80ನೇ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೂಸ್‌ವೆಲ್ಟ್, ಚರ್ಚಿಲ್ ಮತ್ತು ಸ್ಟ್ಯಾಲಿನ್ ಅವರುಗಳ ಪರಿಶ್ರಮದಿಂದ ಈ ಸಂಸ್ಥೆ ಅಕ್ಟೋಬರ್ 24,1945ರಲ್ಲಿ ಅಸ್ಥಿತ್ವಕ್ಕೆ ಬಂದಿತು. ವಿಶ್ವದ ಸಮಗ್ರ ಅಭಿವೃದ್ಧಿಗೆ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿ ತುಂಬಾ ಅವಶ್ಯಕವಾಗಿದೆ. ಮೊದಲನೆ ವಿಶ್ವ ಸಮರದ ನಂತರ ಯುದ್ಧವನ್ನು ತಡೆಗಟ್ಟಲು ರಾಷ್ಟ್ರ ಸಂಘ ವಿಫಲವಾಯಿತು. ಎರಡನೇ ಮಹಾ ಯುದ್ಧ ನಂತರ ವಿಶ್ವದೆಲ್ಲೆಡೆ ಶಾಂತಿ ಹಾಗೂ ಅಭಿವೃದ್ಧಿಗಾಗಿ ಉದಯಿಸಿದ ಸಂಸ್ಥೆ ಸಂಸ್ಥೆ ಇದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಭಾರತವು ವಿಶ್ವಶಾಂತಿ, ಸ್ನೇಹ, ಸಹಕಾರ ತತ್ವಗಳಿಗಾಗಿ ಹಿಂದಿನಿಂದಲೂ ಶ್ರಮಿಸುತ್ತಿದೆ. ನಮ್ಮ ದೇಶ ಎಲ್ಲಾ ರಾಷ್ಟ್ರಗಳ ಜೊತೆಗೆ ಉತ್ತಮವಾದ ಬಾಂಧವ್ಯ ಬಯಸುತ್ತದೆ, ಹೊರತು ಯುದ್ದವನ್ನಲ್ಲ ಎಂಬುದನ್ನು ಶತ್ರು ರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ವರ್ಷಾರಾಣಿ, ಚಂದ್ರಲೇಖಾ, ಸೇವಕಿ ನಾಗಮ್ಮ ಮತ್ತು ವಿದ್ಯಾರ್ಥಿಗಳು ಇದ್ದರು.